ಗುಂಡ್ಲುಪೇಟೆ ಪಟ್ಟಣದ ಚಿಕ್ಕಕೆರೆಯಂಗಳದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಹಾಗೂ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡರು. 
ಜಿಲ್ಲೆ

ಚಿಕ್ಕಕೆರೆ ಅಂಗಳದಲ್ಲಿ ಪಕ್ಷಿ ವೀಕ್ಷಣೆ

ಗುಂಡ್ಲುಪೇಟೆ: ಗುಂಡ್ಲು ಪರಿಸರ ಬಳಗದ ವತಿಯಿಂದ ಪಟ್ಟಣದ ಚಿಕ್ಕಕೆರೆ ಅಂಗಳದಲ್ಲಿ ಭಾನುವಾರ ಮಕ್ಕಳಿಗಾಗಿ ಪಕ್ಷಿ ವೀಕ್ಷಣೆ ಹಾಗೂ ಚಿತ್ರ ಬಿಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುಂಡ್ಲು ಪರಿಸರ ಬಳಗದ ಶ್ರೀಕಂಠ ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ 15 ಮಕ್ಕಳಿಂದ ವೀಕ್ಷಣೆ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಚಿಟ್ಟು ಮಡಿವಾಳ(ಇಂಡಿಯನ್ ರಾಬಿನ್), ಕಳ್ಳಿಪೀರ(ಬ್ಲೂ ಟೇಲ್ಡ್ ಗ್ರೀನ್ ಬೀ ಈಟರ್), ಚೋರೆಹಕ್ಕಿ (ಲಾಫಿಂಗ್ ಡವ್), ಕಪ್ಪು ಕಾಜಾಣ(ಬ್ಲ್ಯಾಕ್ ಡ್ರೋಂಗೊ), ಗೊರವಂಕ(ಕಾಮನ್ ಮೈನಾ), ಬೈತಲೆ ಕಬ್ಬಕ್ಕಿ (ಬ್ರಾಹ್ಮಿಣಿ ಸ್ಟಾಲಿರ್ಂಗ್), ಕಪ್ಪು ಬಿಳಿ ಸಿಪಿಳೆ (ಪೈಡ್ ವ್ಯಾಗ್ಟೇಲ್), ಉಯಿಲಕ್ಕಿ(ವಾರ್ಬ್ಲರ್), ನೀರು ಕಾಗೆ(ಕಾರ್ಮೊರಂಟ್), ಮಧುರಕಂಠ(ಕಾಮನ್ ಐಯೊರ), ಚೇಕಡಿ ಹಕ್ಕಿ (ಸಿನಾರಿಯಸ್ ಟಿಟ್), ಗುಳುಮುಳುಕ(ಲಿಟ್ಲ್ ಗ್ರೀಬ್), ಕೊಳದ ಬಕ (ಪಾಂಡ್ ಹೆರಾನ್) ಬೆಳ್ಳಕ್ಕಿ (ಇಗ್ರೆಟ್), ನೀಲಿ ಮಿಂಚುಳ್ಳಿ (ಕಾಮನ್ ಕಿಂಗ್‌ಫಿಷರ್)ಗಳು ಕಂಡುಬಂದವು.
ಪಕ್ಷಿಗಳನ್ನು ವೀಕ್ಷಿಸಿದ ನಂತರ ಚಿಕ್ಕಕೆರೆಯ ಪಕ್ಕದಲ್ಲಿರುವ ಪಟ್ಟಲದಮ್ಮನವರ ದೇವಸ್ಥಾನದ ಅಂಗಳದಲ್ಲಿ ಮಕ್ಕಳಿಗೆ ಪಕ್ಷಿಗಳು ಜೀವ ಪರಿಸರ ವ್ಯವಸ್ಥೆಯಲ್ಲಿ ವಹಿಸುವ ಪಾತ್ರ ಹಾಗೂ ಪಕ್ಷಿಗಳ ಪ್ರಾಮುಖ್ಯತೆಯನ್ನು ಕುರಿತು ತಿಳಿಹೇಳಲಾಯಿತು. ಮಕ್ಕಳಿಗೆ ಅವರು ಕಂಡಂತಹ ಪಕ್ಷಿಗಳ ಚಿತ್ರ ಬಿಡಿಸುವ ಚಟುವಟಿಕೆಯನ್ನೂ ಏರ್ಪಡಿಸಲಾಗಿತ್ತು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿ.ನಾ. ಚಿದಾನಂದಸ್ವಾಮಿ, ಮಂಜುನಾಥ ಪಂಡಿತ್, ಮುರಳಿ, ಬೆಟ್ಟಹಳ್ಳಿ ಆನಂದ, ಸಚಿನ್ ಹಾಜರಿದ್ದರು.