ಚನ್ನಮ್ಮನ ಕಿತ್ತೂರ: ಕರೊನಾ ವೈರಸ್ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದರಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳೇ ನಿಜವಾದ ದೇವರು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಸ್ಥಳೀಯ ಶಕುಂತಲಾ ಗಡಗಿ ಗ್ರಾಮೀಣ ಆಸ್ಪತ್ರೆಯಲ್ಲಿ ಶುಕ್ರವಾರ ಕರೊನಾ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ 7 ಆಕ್ಸಿಜನ್‌ಯುಕ್ತ 20 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿದ್ದರೆ ಮುಂದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಮದುವೆ ಮುಂತಾದ ಕಾರ್ಯಕ್ರಮಗಳನ್ನು ಕೋವಿಡ್ ನಿಯಮದ ಪ್ರಕಾರ ಮಾಡಿಕೊಳ್ಳಬೇಕು. ಹೆಚ್ಚಿಗೆ ಜನ ಸೇರಬೇಡಿ ಅಧಿಕಾರಿಗಳಿಗೆ ಒತ್ತಡ ತಂದು ಹೆಚ್ಚಿಗೆ ಜನ ಸೇರುವುದನ್ನು ಮಾಡಬೇಡಿ. ಎಲ್ಲದಕ್ಕಿಂತ ಆರೋಗ್ಯ ಮುಖ್ಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
ಕರೊನಾ ವೈರಸ್ ಹೋಗಲಾಡಿಸಲು ಎಲ್ಲರೂ ಪಾಲುದಾರರಾಗಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಅನವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರಬಾರದು. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ಧ ರಿಸಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮಾತನಾಡಿ, ಕರೊನಾ 2 ನೇ ಅಲೆಯು ತೀವ್ರಗತಿಯಿಂದ ಹರಡುತ್ತಿದ್ದು ಹೆಚ್ಚಿನ ಜನಸಂದಣಿ ಉಂಟಾದರೆ ಅದರ ವೇಗ ಹೆಚ್ಚಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕರೊನಾ ವೈರಸ್ ಬಗ್ಗೆ ಎಚ್ಚರವಹಿಸಬೇಕು. ಅನವಶ್ಯಕವಾಗಿ ರಸ್ತೆಗೆ ಬರಬೇಡಿ, ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳವುದಕ್ಕಾಗಿ ನಾವು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಪಪಂ ಮುಖ್ಯಾಧಿಕಾರಿ ಪ್ರಕಾಶ ಮಠದ, ಗಡಗಿ ಆಸ್ಪತ್ರೆಯ ಡಾ. ಎಂ. ಎಸ್. ಹೊತ್ತಗಿಮಠ, ಡಾ.ಚಂದ್ರಶೇಖರ, ಸಮುದಾಯ ಆರೋಗ್ಯ ಕೇಂದ್ರದ ಡಾ. ಜ್ಯೋತಿ, ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ, ಕಂದಾಯ ನಿರೀಕ್ಷಕ ಬಿ. ವಿ. ಬಡಗಾವಿ ಇತರರು ಇದ್ದರು.