ಜಿಲ್ಲೆ

ಚಿಕಿತ್ಸಾ ಪರಿಕರ ಖಾತ್ರಿಪಡಿಸಿಕೊಳ್ಳಿ, ಎಡಿಸಿ ವಿಜಯಾರವಿಕುಮಾರ್ ತಾಕೀತು, ಆಕ್ಸಿಜನ್, ಬೆಡ್ ವ್ಯವಸ್ಥೆ ಪರಿಶೀಲನೆ

ಬೆಂಗಳೂರು ಗ್ರಾಮಾಂತರ: ಕೋವಿಡ್ ಮೂರನೇ ಅಲೆ ತೀವ್ರಗೊಳ್ಳುವ ಆತಂಕ ಇರುವುದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅವಶ್ಯವಿರುವ ಬೆಡ್, ಆಕ್ಸಿಜನ್ ಸೇರಿ ವೈದ್ಯಕೀಯ ಪರಿಕರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ರವಿಕುಮಾರ್ ತಾಕೀತು ಮಾಡಿದರು.

ಹೊಸಕೋಟೆ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಎಂವಿಜೆ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಆಕ್ಸಿಜನ್ ಸಂಗ್ರಹಣೆ ಹಾಗೂ ಬೆಡ್ ಹಂಚಿಕೆ ಸ್ಥಿತಿಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಸೋಂಕು ತೀವ್ರಗೊಂಡ ಬಳಿಕ ವೈದ್ಯಕೀಯ ಪರಿಕರಗಳ ವ್ಯವಸ್ಥೆ ಬಗ್ಗೆ ನಿಗಾವಹಿಸುವುದಕ್ಕಿಂತ ಮೊದಲೇ ಇಮುಂಜಾಗ್ರತೆ ಕೈಗೊಳ್ಳುವುದರಿಂದ ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಸೋಂಕು ನಿಯಂತ್ರಣದ ಜತೆಗೆ ಸಾವಿನ ಪ್ರಮಾಣ ತಪ್ಪಿಸಲು ಪ್ರತಿ ನೌಕರನೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಕೋವಿಡ್ ಪರೀಕ್ಷೆ ಹೆಚ್ಚಿಸಿ: ಜಿಲ್ಲೆಯಲ್ಲಿ ಕರೊನಾ ಪ್ರಕರಣ ಶೂನ್ಯದಲ್ಲಿದ್ದು, ವಾರದಿಂದ ಹೆಚ್ಚಳವಾಗುತ್ತಿದೆ. ಆದ್ದರಿಂದ ಎಲ್ಲ ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು, ಸೋಂಕು ಪತ್ತೆಯಾದರೆ ಕೂಡಲೇ ಅವರಿಗೆ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ಎಡಿಸಿ ಸೂಚಿಸಿದರು.

ಕೋವಿಡ್ ಸೋಂಕಿತ ವ್ಯಕ್ತಿಗಳಲ್ಲಿ ಅಗತ್ಯವಿರುವವರಿಗೆ ಆಕ್ಸಿಜನ್ ಸರಬರಾಜು ಹಾಗೂ ಸೋಂಕಿತರಿಗೆ ಎಲ್ಲಿಯೂ ಬೆಡ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಈ ಸಂಬಂಧ ಆಕ್ಸಿಜನ್ ಸಂಗ್ರಹಣೆ ಹಾಗೂ ಬೆಡ್‌ಗಳ ಲಭ್ಯತೆ ಬಗ್ಗೆ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಕೋವಿಡ್‌ಲಸಿಕೆ ನೀಡುವ ವೇಗವನ್ನು ಮತ್ತಷ್ಟು ಚುರುಕುಗೊಳಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

ಹೋಮ್ ಐಸೋಲೇಷನ್‌ನಲ್ಲಿರುವವರ ಚಲನವಲನ ಹಾಗೂ ಆರೋಗ್ಯದ ಸ್ಥಿತಿಗತಿ ಕುರಿತು ಪ್ರತಿದಿನ ತಪಾಸಣೆ ನಡೆಯಬೇಕು ಎಂದು ಹೇಳಿದರು.

ಹೊಸಕೋಟೆ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ವೈದ್ಯಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಜತೆಗೆ ವೈದ್ಯಕೀಯ ಪರಿಕರಗಳನ್ನು ಸುಸ್ಥಿತಿಯಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಪರ್ಕಿತರ ಪತ್ತೆಗೆ ನಿಗಾ: ಕೋವಿಡ್ ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಒತ್ತು ನೀಡುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ, ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಧರ್ಮೇಂದ್ರ ಹೇಳಿದರು.

ವ್ಯಾಕ್ಸಿನ್ ಪರಿಶೀಲನೆ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಂಕಿತರಿಗೆ ಮೀಸಲಿಟ್ಟಿರುವ ಹಾಸಿಗೆ, ಆಮ್ಲಜನಕ ಸಂಗ್ರಹಣೆ ಪರಿಶೀಲಿಸಿದ ಎಡಿಸಿ ಬಳಿಕ ಹೊಸಕೋಟೆಯ ಕ್ಯಾತಿ ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾದ ಕರೊನಾ ಲಸಿಕಾ ಅಭಿಯಾನ ಪರಿಶೀಲಿಸಿದರು. ಜತೆಗೆ ವ್ಯಾಕ್ಸಿನ್ ನೀಡುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ವೈದ್ಯಸಿಬ್ಬಂದಿಗೆ ಎಚ್ಚರಿಕೆ ನೀಡಿದರು.