ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಮನುಷ್ಯನನ್ನು ಕಾಡುವ ಚಿಂತೆಗಳು ಹಲವಾರು. ಚಿತೆಯಿಂದ ನಿರ್ಜೀವ ವಸ್ತುಗಳು ಚಿಂತೆಯಿಂದ ಸಜೀವ ವಸ್ತುಗಳು ನಾಶ ಹೊಂದುತ್ತವೆ. ಚಿಂತೆ, ಚಿಂತನಗೊಂಡಾಗ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಅಗಡಿ ಗ್ರಾಮದಲ್ಲಿ ಸೋಮವಾರ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಪತ್ತಿನ ಬೆಲೆಗಿಂತ ಸಂಸ್ಕಾರಕ್ಕೆ ಬೆಲೆ ಹೆಚ್ಚು. ಮನುಷ್ಯನ ವ್ಯಕ್ತಿತ್ವವನ್ನು ಬಟ್ಟೆ, ಸಂಪತ್ತಿನಿಂದ ಅಳೆಯಬಾರದು. ವ್ಯಕ್ತಿಗೆ ಗುಣ ಸಂಸ್ಕಾರಗಳೇ ನಿಜ ಸಂಪತ್ತು. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆಯಾಗುತ್ತದೆ. ಸಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ. ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ. ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ. ಬಹಳಷ್ಟು ಜನ, ಜಗತ್ತು-ಜನ ಬದಲಾವಣೆಯಾಗಿದೆ ಎನ್ನುತ್ತಾರೆ. ಆದರೆ, ಮೆಣಿಸಿನ ಖಾರ, ಮಾವಿನ ಹಣ್ಣಿನ ಸಿಹಿ, ಎಲೆಗಳ ಬಣ್ಣ ಬದಲಾಗಿಲ್ಲ. ಮನುಷ್ಯನ ಭಾವನೆಗಳು ಮತ್ತು ನಡವಳಿಕೆಗಳು ಬದಲಾವಣೆಯಾಗಿವೆ ಎಂದರು.
ಯಾರ ಹಣೆ ಬರಹದಲ್ಲಿ ಏನಿದೆಯೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕೃಷ್ಣ ಮಹಾಭಾರತದಲ್ಲಿ ಕುದುರೆ ರಥ ಓಡಿಸುವ ಸಾರಥಿಯಾದ ಎಂಬುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಉಸಿರಾಟಕ್ಕೆ ಗಾಳಿ ಎಷ್ಟು ಅವಶ್ಯಕವೋ ಅಷ್ಟೇ ಜೀವನದ ಉನ್ನತಿಗೆ ಗುರು ತೋರಿದ ದಾರಿ ಮತ್ತು ಕೊಟ್ಟ ಸಂಸ್ಕಾರ ಮುಖ್ಯ. ಸತ್ಯ, ಧರ್ಮ, ನ್ಯಾಯ, ನೀತಿಗಳ ಅರಿವು ಇಲ್ಲದಂತಾಗಿ ಮನುಷ್ಯ ಕವಲು ದಾರಿಯಲ್ಲಿ ನಡೆಯುತ್ತಿದ್ದಾನೆ. ಅರಿವಿನ ಕಣ್ಣು ತೆರೆಸಲು ಗುರು ಬೇಕು. ಗುರು ಕಾರುಣ್ಯ ಬೇಕು. ಮಲಿನಗೊಂಡ ಮನಸ್ಸನ್ನು ಪರಿಶುದ್ಧಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆಯೆಂದು ರೇಣುಕ ಗೀತೆ ಸಾರುತ್ತದೆ. ಯುವ ಜನಾಂಗ ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಶಕ್ತ ರಾಷ್ಟ್ರ ನಿರ್ವಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮದ ದಿಕ್ಸೂಚಿ ಮತ್ತು ಗುರುವಿನ ಬೋಧಾಮೃತ ಇಲ್ಲದೇ ಇದ್ದರೆ ಜೀವನ ಶ್ರೇಯಸ್ಸು ಪ್ರಾಪ್ತವಾಗದು. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಆದರ್ಶ, ಮೌಲ್ಯಗಳನ್ನು ಕಾಣಬಹುದು ಎಂದರು.
ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ 2 ದಿನಗಳ ಕಾಲ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥ ಕುರಿತು ಉಪದೇಶಾಮೃತವನ್ನಿತ್ತರು. ಬಂಕಾಪುರ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಂಜಿಗಟ್ಟಿ ಚರಂತೇಶ್ವರ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲಘಟಗಿ ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಸಮಾರಂಭಕ್ಕೂ ಮುನ್ನ ಅಗಡಿ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಉತ್ಸವದಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಡೊಳ್ಳು, ವೀರಗಾಸೆ ಹಲವರು ಭಜನಾ ಸಂಘಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದ ದೃಶ್ಯ ಅಪೂರ್ವವಾಗಿತ್ತು.