ಚಿಂತಾಮಣಿ : ನಗರಸಭೆ ಮೊದಲನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಭಾರತೀಯ ಪ್ರಜಾ ಪಕ್ಷದ ರೇಖಾ ಉಮೇಶ್ ಮತ್ತು ಉಪಾಧ್ಯಕ್ಷರಾಗಿ ಸುಹಾಸಿನಿ ಶೇಷರೆಡ್ಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಘುನಂದನ್ ಘೋಷಿಸಿದರು.
ನಗರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ (ಬಿ) ಮಹಿಳೆಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಭಾರತೀಯ ಪ್ರಜಾ ಪಕ್ಷದ 5ನೇ ವಾರ್ಡ್‌ನ ರೇಖಾ ಉಮೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡ್‌ನ ಸುಹಾಸಿನಿ ಶೇಷರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎಂ.ಕೃಷ್ಣಾರೆಡ್ಡಿ ಬೆಂಬಲಿತ 31ನೇ ವಾರ್ಡ್‌ನ ಮಂಜುಳಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 25ನೇ ವಾರ್ಡ್‌ನ ಮಂಜುಳಾ ನಾಮಪತ್ರ ಸಲ್ಲಿಸಿದ್ದರು.ಅಂತಿಮ ಕಣದಲ್ಲಿ ರೇಖಾ ಉಮೇಶ್ ಹಾಗೂ ಸುಹಾಸಿನಿ ಶೇಷರೆಡ್ಡಿ ತಲಾ 17 ಮತ ಪಡೆದರೆ, ಪ್ರತಿಸ್ಪರ್ಧಿಗಳಿಗೆ ತಲಾ 16 ಮತಗಳು ದೊರೆತವು.
ಒಟ್ಟು 31 ವಾರ್ಡ್‌ಗಳು : ಚಿಂತಾಮಣಿ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು ಜೆಡಿಎಸ್ 14 ವಾರ್ಡಗಳಲ್ಲಿ, ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಬೆಂಬಲಿತ ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿಗಳು 14 ವಾರ್ಡ್‌ಗಳಲ್ಲಿ, ಕಾಂಗ್ರೆಸ್ ಒಂದು ವಾರ್ಡ್ ಮತ್ತು ಪಕ್ಷೇತರರು ಎರಡು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರು.
ಯಾರಿಗೆ ಯಾರು ಬೆಂಬಲ : ಜೆಡಿಎಸ್‌ನಲ್ಲಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 24ನೇ ವಾರ್ಡ್‌ನ ನಗರಸಭಾ ಸದಸ್ಯೆ ಇಷರತ್ ಉನ್ನಿಸಾ ಜೆಡಿಎಸ್‌ಗೆ ಬೆಂಬಲ ಸೂಚಿಸಿದರೆ, 18ನೇ ವಾರ್ಡ್‌ನಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಮಹಮದ್ ಷಫೀಕ್ ಶಾಸಕ ಎಂ.ಕೃಷ್ಣಾರೆಡ್ಡಿಯವರ ವಿರುದ್ಧ ಮುನಿಸಿಕೊಂಡು ಮಾಜಿ ಶಾಸಕರ ಪಕ್ಷವಾದ ಭಾರತೀಯ ಪ್ರಜಾ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು. ಇನ್ನು ಕಾಂಗ್ರೆಸ್‌ನಲ್ಲಿ ಗೆಲುವು ಸಾಧಿಸಿದ್ದ 2ನೇ ವಾರ್ಡ್‌ನ ನಗರಸಭಾ ಸದಸ್ಯ ಮುರಳಿ ಜೆಡಿಎಸ್‌ಗೆ ಬೆಂಬಲ ಸೂಚಿಸಿದರೆ, 11ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಅಕ್ಷಯಕುಮಾರ್ ಮಾಜಿ ಶಾಸಕರ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನು ಶಾಸಕ ಎಂ.ಕೃಷ್ಣಾರೆಡ್ಡಿ ಪಕ್ಷದ ಸದಸ್ಯರಿಗೆ ಬೆಂಬಲ ಸೂಚಿಸಿದರೆ ಕೋಲಾರದ ಸಂಸದ ಎನ್.ಮುನಿಸ್ವಾಮಿ ಮಾಜಿ ಶಾಸಕರ ಬೆಂಬಲಿತ ಭಾರತೀಯ ಪ್ರಜಾ ಪಕ್ಷಕ್ಕೆ ಬೆಂಬಲ ಸೂಚಿಸಿದರು.
ವಿಜಯೋತ್ಸವ : ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಭಾರತೀಯ ಪ್ರಜಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಗರದ ಬೆಂಗಳೂರು ಜೋಡಿರಸ್ತೆಯ ತಹಸೀಲ್ದಾರ್ ವೃತ್ತದಲ್ಲಿ ಮತ್ತು ಎನ್.ಆರ್.ಬಡಾವಣೆಯ ಆರ್‌ಎಸ್‌ಎಲ್ ನರ್ಸಿಂಗ್ ಹೋಂ ರಸ್ತೆಯ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.