ಚಿಂಚೋಳಿ: ಮಿರಿಯಾಣ, ರೋಡ್ ಕಲ್ಲೂರ ಸೇರಿ ಹಲವೆಡೆ ಲೈಸೆನ್ಸ್ ಪಡೆಯದ ಹಾಗೂ ಅಕ್ರಮವಾಗಿ ವಿದ್ಯುತ್ ಪಡೆದ ಗಣಿಗಾರಿಕೆಗಳ ಮೇಲೆ ಜೆಸ್ಕಾಂ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಅನಧಿಕೃತವಾಗಿ ಅಳವಡಿಸಿದ್ದ ವಿದ್ಯುತ್ ಪರಿವರ್ತಕಗಳನ್ನು ವಶಪಡಿಸಿಕೊಂಡರು.
ಅಕ್ರಮವಾಗಿ 63 ಕೆವಿಯ ಎರಡು ಟ್ರಾನ್ಸ್ಫಾರ್ಮರ್ ಅಳವಡಿಸಿ ಸುಮಾರು ನಾಲ್ಕು ಕ್ವಾರಿಗಳಿಗೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಬ್ಲಾಕ್ ಅಧ್ಯಕ್ಷ ಸಂತೋಷ ಗುತ್ತೇದಾರ್ ಶುಕ್ರವಾರ ನೀಡಿದ ದೂರಿನನ್ವಯ ದಾಳಿ ನಡೆಸಲಾಗಿದೆ.
ಟಿಸಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಕಾನೂನು ಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿ ಮೋಹನ ರಾಠೋಡ್ ತಿಳಿಸಿದರು.
ಮಿರಿಯಾಣದಲ್ಲಿ ಕೇವಲ 17 ಜನರು ಗಣಿಗಾರಿಕೆಗೆ ಪರವಾನಗಿ ಪಡೆದಿದ್ದಾರೆ. ಆದರೆ ಸಾಕಷ್ಟು ಜನರು ಕ್ವಾರಿಗಳನ್ನು ನಡೆಸುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಕೊಳ್ಳೆ ಹೊಡೆಯುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು.
| ಸಂತೋಷ ಗುತ್ತೇದಾರ್ ಬ್ಲಾಕ್ ಅಧ್ಯಕ್ಷ, ಕಾಂಗ್ರೆಸ್ ಪರಿಶಿಷ್ಟ ವಿಭಾಗ