ಹನೂರು; ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಖದೀಮರು ಶನಿವಾರ ರಾತ್ರಿ 5 ಮೇಕೆಗಳನ್ನು ಕದ್ದೊಯ್ದಿದ್ದರೆ, ಇತ್ತ ಭಾನುವಾರ ಕೌದಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 2 ಮೇಕೆಗಳು ಬಲಿಯಾಗಿವೆ.
ಚಿಂಚಳ್ಳಿ ಗ್ರಾಮದ ಕುಮಾರ್ ಎಂಬುವರು ಜಮೀನಿನ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿ ಹಾಕಿದ್ದರು. ಆದರೆ, ತಡರಾತ್ರಿ ಕಳ್ಳರು ಕೊಟ್ಟಿಗೆಗೆ ಲಗ್ಗೆ ಇಟ್ಟು 5 ಮೇಕೆಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಭಾನುವಾರ ಎಂದಿನಂತೆ ಮೇಯಿಸಲು ತೆರಳುತ್ತಿದ್ದ ವೇಳೆ 5 ಮೇಕೆಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹನೂರು ಠಾಣೆ ಪೊಲೀಸರು ಮಾಹಿತಿ ಪಡೆದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಇನ್ನು ಕೌದಳ್ಳಿ ಗ್ರಾಮದಲ್ಲಿ ಸಿದ್ದರಾಜು ಎಂಬುವರ ಜಮೀನಿನಲ್ಲಿ ಭಾನುವಾರ ಮೇಯುತ್ತಿದ್ದ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, 2 ಮೇಕೆಗಳನ್ನು ಗಾಯಗೊಳಿಸಿವೆ. ಈ ಬಗ್ಗೆ ತಿಳಿದ ಸಿದ್ದರಾಜು ಅವರು ಮೇಕೆಗಳನ್ನು ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರೊಳಗೆ ಮೇಕೆಗಳು ಮೃತಪಟ್ಟಿವೆ.