ಕಲಬುರಗಿ: ಎಲ್ಲವನ್ನು ಕೊಟ್ಟಿರುವ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಂದ ಬಿಜೆಪಿಗೆ ಎಳ್ಳಷ್ಟೂ ಹಾನಿ ಆಗಲ್ಲ ಎಂದು ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಚಿಂಚನಸೂರ್ ತೊಲಗಿರುವುದು ಬಿಜೆಪಿಗೆ ಇನ್ನಷ್ಟು ಶಕ್ತಿ ಬಂದAತಾಗಿದೆ. ನಮ್ಮ ಪಕ್ಷದಲ್ಲಿರುವ ಹಲವಾರು ಕೋಲಿ ಸಮಾಜದ ನಾಯಕರು ಬೆಳೆಯಲಿದ್ದಾರೆ. ಅವರನ್ನು ಬೆಳೆಯಲು ಚಿಂಚನಸೂರ್ ಬಿಟ್ಟಿರಲಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೋಲಿ ಕಬ್ಬಲಿಗ ಸಮಾಜದ ಹೆಸರು ಹೇಳಿ ರಾಜಕೀಯ ಮಾಡುವ ಚಿಂಚನಸೂರ್ ಎಂದಿಗೂ ಸಮಾಜದ ಹಿತಕ್ಕಾಗಿ ದುಡಿದಿಲ್ಲ. ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಮಾತೆತ್ತಿದರೆ ನನಗೆ ಮಕ್ಕಳಿಲ್ಲ, ಸಮಾಜವೇ ಮಕ್ಕಳು ಎನ್ನುವ ಅವರು ಏನು ಕೊಡುಗೆ ನೀಡಿದ್ದಾರೆ ಹೇಳಲಿ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ನೀಡಿದ ಎಲ್ಲ ಅಧಿಕಾರ ಬಳಸಿಕೊಂಡು ಈಗ ಹೊರನಡೆಯುವ ಮೂಲಕ ದ್ರೋಹ ಬಗೆದಿರುವ ಅವರು ಕಾಂಗ್ರೆಸ್‌ನಲ್ಲಿ ಮೂಲೆಗುಂಪು ಆಗಲಿದ್ದಾರೆ. ಚಿಂಚನಸೂರ್ ಕೋಲಿ ಸಮಾಜದ ಪ್ರಶ್ನಾತೀತ ನಾಯಕ ಅಲ್ಲ. ಇಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರಂತಹ ಸ್ವಾಭಿಮಾನಿಗೆ ಅದ್ಹೇಗೆ ಚಿಂಚನಸೂರ್ ಅನಿವಾರ್ಯವಾದರು ಎಂಬುದು ಅರ್ಥವಾಗುತ್ತಿಲ್ಲ. ಖರ್ಗೆ ಗಮನಕ್ಕಿಲ್ಲದೆ ಕಾಂಗ್ರೆಸ್ ಸೇರಿರಬಹುದು. ಅದರಲ್ಲಿ ಡಿಕೆಶಿ ಪಾತ್ರವಿರಬಹುದು ಎಂದು ವ್ಯಂಗ್ಯವಾಡಿದರು.
ಕಾAಗ್ರೆಸ್ ಭದ್ರಕೋಟೆ ಛಿದ್ರಗೊಳಿಸಲು ಬಿಜೆಪಿ ಸೇರಿರುವ ನಾನು, ಅಂದ ಮಾತಿನಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದು, ಈಗ ಅವರ ಮಗನನ್ನು ಸೋಲಿಸದೆ ಬಿಡುವುದಿಲ್ಲ. ನನ್ನ ಉಸಿರು ಇರುವವರೆಗೂ ಬಿಜೆಪಿಯಲ್ಲಿಯೇ ಇರುವೆ. ಕೆಲವರು ಮಾತನಾಡುವುದೆಲ್ಲ ಊಹಾಪೋಹ, ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮುಖಂಡರಾದ ಶಿವಕಾಂತ ಮಹಾಜನ್, ಶೋಭಾ ಬಾಣಿ, ವಿಜಯಕುಮಾರ ಹಲಕರ್ಟಿ ಇದ್ದರು.