ಚಿತ್ತಾಪುರ: ಮಾಜಿ ಸಚಿವ, ಕೋಲಿ ಸಮಾಜದ ಹಿರಿಯ ಮುಖಂಡ ಬಾಬುರಾವ ಚಿಂಚನೂರ ಅವರ ಕಲಬುರಗಿಯ ನಿವಾಸಕ್ಕೆ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವ ಭಾನುಪ್ರತಾಪ ವರ್ಮಾ ಬುಧವಾರ ರಾತ್ರಿ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಕೆಲಕಾಲ ಇಬ್ಬರ ಮಧ್ಯೆ ಮಾತುಕತೆ ನಡೆಯಿತು. ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದು, ಸುಮಾರು ಅರ್ಧಗಂಟೆಗೂ ಅಧಿಕ ಸಮಯ ಕಾಲ ಕಳೆದರು. ಈ ಭೇಟಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಬಳಿಕ ಮಾಧ್ಯಮಗಳೊಂದಿಗೆ ಬಾಬುರಾವ ಚಿಂಚನಸೂರ ಮಾತನಾಡಿ, ನಮ್ಮಿಬ್ಬರ ಮಧ್ಯೆ ಯಾವುದೇ ಮಹತ್ವದ ಮಾತುಕತೆ ನಡೆದಿಲ್ಲ. ನನ್ನ ಆರೋಗ್ಯ ವಿಚಾರಣೆಗೆ ಬಂದಿದ್ದಾರೆ. ದೇವರ ಅನುಗ್ರಹ, ಜನರ ಆಶೀರ್ವಾದದಿಂದ ನನ್ನ ಆರೋಗ್ಯ ಸುಧಾರಣೆಯಾಗಿದೆ. ಶೀಘ್ರದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುವೆ. ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವುದಕ್ಕಾಗಿಯೇ ನಾನು ಜನಿಸಿದ್ದು, ನನ್ನ ಕೆಲಸ ಮುಗಿಸಿಯೇ ಜೀವ ಬಿಡುತ್ತೇನೆ ಎಂದು ಹೇಳಿದರು.
ಕೆಲವರು ನನ್ನ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಯಾರು ಭಯ ಪಡಬೇಕಿಲ್ಲ. ನಾನು ಆರೋಗ್ಯವಾಗಿದ್ದೇನೆ. ಈಗ ನೂರು ಆನೆ ಬಲ ಬಂದಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆನೆಯಂತೆ ಎಲ್ಲ ಕಡೆ ಓಡಾಡುತ್ತೇನೆ. ನನಗೆ ಜನರೇ ಹೈಕಮಾಂಡ್, ನನ್ನ ವಿರುದ್ಧ ಪಿತೂರಿ ಮಾಡಿದವರು ಯಾರೆಂಬುದು ನನಗೆ ಗೊತ್ತಿದೆ. ಈ ಬಗ್ಗೆ ನಾನೇನು ಹೇಳಲಾರೆ ಎಂದರು. ಸAಸದ ಡಾ.ಉಮೇಶ ಜಾಧವ್, ಅಮರೇಶ್ವರ ಚಿಂಚನಸೂರ, ಪ್ರಮುಖರಾದ ತಿಪ್ಪಣ್ಣರೆಡ್ಡಿ, ಶರಣಪ್ಪ ತಳವಾರ ಇತರರಿದ್ದರು.