ಜಿಲ್ಲೆ

ಚಾಲಕ ಮೂರ್ಛೆ ಹೋಗಿ ಮರಕ್ಕೆ ಬಸ್ ಡಿಕ್ಕಿ

ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಚಿಕ್ಕರಂಗದೊಡ್ಡಿ ಕ್ರಾಸ್ ಬಳಿ ಭಾನುವಾರ ಚಾಲಕ ಮೂರ್ಛೆ ಬಿದ್ದು ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡಿದಿದ್ದು, ಐವರಿಗೆ ಸಣ್ಣಪುಟ್ಟ ಗಾಯವಾಗಿವೆ.

ಬೆಳಗ್ಗೆ 9ರ ವೇಳೆಯಲ್ಲಿ ಒಡೆಯರಪಾಳ್ಯದಿಂದ ಕೊಳ್ಳೇಗಾಲದ ಕಡೆಗೆ ಬಸ್ ತೆರಳುತ್ತಿತ್ತು. ಈ ವೇಳೆ ಚಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ರಸ್ತೆ ಬದಿಯಲ್ಲಿದ್ದ ಮರಕ್ಕೆ ಹೊಡೆದಿದೆ. ಬಸ್‌ನಲ್ಲಿ ಸುಮಾರು 35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಮುಂಭಾಗದಲ್ಲಿ ಕುಳಿತಿದ್ದ ಐವರಿಗೆ ಸಣ್ಣಪುಟ್ಟ ಗಾಯಗೊಂಡರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ 112 ಪೊಲೀಸರು ತೆರಳಿ ಪರಿಶೀಲಿಸಿ ಚಾಲಕನನ್ನು ಕೂಡಲೇ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ. ಗಾಯಗೊಂಡ ಐವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬಸ್ ಮರಕ್ಕೆ ಡಿಕ್ಕಿ ಹೊಡೆಯದಿದ್ದಲ್ಲಿ ಹಳ್ಳಕ್ಕೆ ಉರುಳಿ ಬೀಳುವ ಸಾಧ್ಯತೆ ಹೆಚ್ಚಾಗಿತ್ತು. ಸದ್ಯ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜತೆಗೆ ಭಾನುವಾರ ರಜೆ ಇದ್ದ ಕಾರಣ ನಿತ್ಯ ಶಾಲಾ, ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳ ನಿಮಿತ್ತ ತೆರಳುತ್ತಿದ್ದ ಜನರು ಈ ಘಟನೆಯಿಂದ ನಿಟ್ಟುಸಿರು ಬಿಟ್ಟಂತಾಗಿದೆ.