ಜಿಲ್ಲೆ

ಚಾಮುಂಡೇಶ್ವರಿಯಲ್ಲಿ ಕಮಲ ಅರಳಿಸುವುದು ನಮ್ಮ ಗುರಿ: ಟಿ.ಎಸ್. ಶ್ರೀವತ್ಸ

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಮಲ ಅರಳಿಸುವುದೇ ನಮ್ಮ ಗುರಿ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಹೇಳಿದರು.
ಮೈಸೂರು ತಾಲೂಕಿನ ಬೀರಿಹುಂಡಿಯಲ್ಲಿ ಭಾನುವಾರ ಆಯೋಜಿಸಿದ್ದ ಬೀರಿಹುಂಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಬೂತ್ ಪ್ರಮುಖ್ ಸಭೆಯಲ್ಲಿ ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಪ್ರಭಾವ ಹೊಂದಿದೆ. ಆದರೆ ಕಳೆದೆರಡು ಚುನಾವಣೆಗಳಲ್ಲಿ ಕೆಲವು ರಾಜಕೀಯ ವ್ಯತ್ಯಾಸಗಳಿಂದ ಗಂಭೀರವಾಗಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಎನ್.ಅರುಣ್ ಕುಮಾರಗೌಡ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ತರುವಲ್ಲಿ ವಿಫಲವಾಗಿರುವುದು ಮತದಾರರ ಗಮನದಲ್ಲಿದೆ. ಹಾಲಿ ಶಾಸಕರ ವಿರುದ್ಧವೇ ಅವರ ಪಕ್ಷದಲ್ಲಿ ಭಿನ್ನಮತವಿರುವುದು ಜಗಜ್ಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದಿಂದ ನಾವೆಲ್ಲ ಕಾರ್ಯಕರ್ತರು ಒಮ್ಮತದಿಂದ ಕ್ಷೇತ್ರದ ಪ್ರವಾಸ ಮಾಡುತ್ತಿದ್ದೇವೆ. ಪ್ರತಿ ಬೂತ್ ಸಮಿತಿಗಳನ್ನು ಪರಿಶೀಲಿಸಿ ಬೂತ್ ಸಶಕ್ತೀಕರಣ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತಿ ಮನೆಗೂ ತಲುಪಿವೆ. ಇದು ಬಿಜೆಪಿಗೆ ವರದಾನವಾಗಲಿದ್ದು, 2023ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಾಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟಿತರಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡಿ ಮತದಾರರನ್ನು ಜಾಗೃತಗೊಳಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ನಗರ ಜಿಲ್ಲಾಧ್ಯಕ್ಷ ಶ್ರೀವತ್ಸ ಅವರನ್ನು ಕಾರ್ಯಕರ್ತರು ಅಭಿನಂದಿಸಿದರು. ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ, ಹಿಂದಿನ ಚುನಾವಣೆಯ ಪರಾಜಿತ ಅಭ್ಯರ್ಥಿ ಎಸ್.ಆರ್.ಗೋಪಾಲ್ರಾವ್, ನಗರ ಕಾರ್ಯದರ್ಶಿ ನಂದಕುಮಾರ್, ಬೀರಿಹುಂಡಿ ಮಹಾಶಕ್ತಿ ಕೇಂದ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಮರಟಿಕ್ಯಾತನಹಳ್ಳಿ ಕೃಷ್ಣಮಹದೇವು, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಈರಪ್ಪ, ಮುಖಂಡರಾದ ಎನ್.ಕೆ.ರವಿಕುಮಾರ್, ದಾಸನಕೊಪ್ಪಲು ಕೆಂಚಪ್ಪ, ಚಂದ್ರಶೇಖರ್, ಮಾಯಾ ಶಾನ್‌ಬಾಗ್, ರೈತ ಮೋರ್ಚಾ ಮಾಜಿ ಅಧ್ಯಕ್ಷ ಶೆಟ್ಟನಾಯಕನಹಳ್ಳಿ ಮಲ್ಲಿಕಾರ್ಜುನಪ್ಪ, ಸೋಮಣ್ಣ, ಅನಗನಹಳ್ಳಿ ನಿಂಗರಾಜು, ಪ್ರಕಾಶ್, ಮರಯನಹುಂಡಿ ಮೋಹನ್, ಸಿದ್ದೇಗೌಡ, ನಾಗರಾಜು, ಚನ್ನಿಗ ಸ್ವಾಮಿ ಇತರರು ಇದ್ದರು.