ಮೈಸೂರು: ಅನಧಿಕೃತವಾಗಿ ತಲೆ ಎತ್ತಿರುವ ಜೂಜು ಅಡ್ಡೆಗಳನ್ನು ಬಂದ್ ಮಾಡಿಸುವ ಜತೆಗೆ, ಚಾಮುಂಡೇಶ್ವರಿ ಕ್ಷೇತ್ರದ ಮೂಲಸೌಲಭ್ಯ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಹಾಗೂ ವಕೀಲ ಎಂ.ಪಿ.ತಮ್ಮಯ್ಯ ಸರ್ಕಾರವನ್ನು ಆಗ್ರಹಿಸಿದರು.
ರಿಕ್ರಿಯೇಷನ್ ಹೆಸರಿನಲ್ಲಿ ನಗರದಲ್ಲಿ ಅರವತ್ತಕ್ಕೂ ಅಧಿಕ ಸ್ಥಳಗಳಲ್ಲಿ ಜೂಜಾಟ ದಂಧೆ ನಡೆಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಯುವಜನತೆ ಜೂಜು ದಂಧೆಗೆ ಒಳಗಾಗುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನ ಹಲವು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯವ ನೀರಿನ ಸಮರ್ಪಕ ಪೂರೈಕೆ ಅಗುತ್ತಿಲ್ಲ. ಆದರೂ ಸರ್ಕಾರ ವಿದ್ಯುತ್, ನೀರಿನ ಬಿಲ್ ಏರಿಕೆ ಮಾಡಿದೆ. ಕೋವಿಡ್‌ನಿಂದ ಜನರು ಅನುಭವಿಸುತ್ತಿರುವ ತೊಂದರೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ನೀರು ಹಾಗೂ ವಿದ್ಯುತ್ ಬಿಲ್ ಏರಿಕೆ ಮಾಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಜತೆಗೆ ಬಡ್ಡಿ ವಿಧಿಸುವ ನಿರ್ಧಾರ ಕೈ ಬಿಡಬೇಕು ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ದಿನನಿತ್ಯದ ಬೇಕಿರುವಂತಹ ಸಾಮಗ್ರಿಗಳ ದರವನ್ನು ಸರ್ಕಾರ ಕೂಡಲೇ ಇಳಿಕೆ ಮಾಡಬೇಕು. ಜನರಿಗೆ ಜೀವನ ಭದ್ರತೆ ನೀಡಬೇಕಾದ ಸರ್ಕಾರವೇ ಶೇ.40 ಕಮಿಷನ್ ಪಡೆಯತ್ತ ಜನರನ್ನು ಲೂಟಿ ಮಾಡುತ್ತಿದೆ. ಸರ್ಕಾರದ ಈ ಎಲ್ಲ್ಲ ದುರಾಡಳಿತದ ವಿರುದ್ಧ ನಮ್ಮ ಪಕ್ಷ ಕಾನೂನು ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಎ.ಜೆ.ರೇಣುಕಪ್ರಸಾದ್, ಕಾರ್ಯದರ್ಶಿ ರವಿ ಹೂಟಗಳ್ಳಿ , ಖಜಾಂಚಿ ಹಾಗೂ ಮಾಜಿ ಸೈನಿಕ ಎ.ಮಾಚಯ್ಯ, ಗ್ರಾಮಾಂತರ ಕಾರ್ಯದರ್ಶಿ ಮಂಜು, ಉಪ ಕಾರ್ಯದರ್ಶಿ ರಾಜಶೇಖರ್‌ಗೆ ನೇಮಕಾತಿ ಪತ್ರ ವಿತರಿಸಿ ಅಭಿನಂದಿಸಲಾಯಿತು.