ಜಿಲ್ಲೆ

ಚಾಮುಂಡಿಬೆಟ್ಟದಲ್ಲಿ ಒಂದು ಗಂಟೆಯಲ್ಲಿ ಸಿಕ್ಕತ್ತು 30 ಚೀಲ ಪ್ಲಾಸ್ಟಿಕ್

ಮೈಸೂರು: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಕಸ ಸಂಗ್ರಹಿಸುವ ವಿಶೇಷ ಅಭಿಯಾನಕ್ಕೆ ಶುಕ್ರವಾರ ಚಾಲನೆ ದೊರೆಯಿತು.


ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿರುವ ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಪಕ್ಷಿ ಸಂಕುಲ ಮಾತ್ರವಲ್ಲದೆ, ಬೆಟ್ಟದ ಮಣ್ಣಿನ ಸವಕಳಿಗೂ ಕಾರಣವಾಗುತ್ತಿದೆ. ಈಗಾಗಲೇ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ತಾಣವಾಗಿ ಘೋಷಿಸಲಾಗಿದೆಯಾದರೂ, ಇದರ ಬಳಕೆ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ಮಾರ್ಗದಲ್ಲಿ ಪ್ರವಾಸಿಗರು ಹಾಗೂ ಭಕ್ತರು ಎಲ್ಲೆಂದರಲ್ಲಿ ಎಸೆದಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ.


ಸ್ವಯಂಸೇವಕರು, ಪರಿಸರ ಪ್ರೇಮಿಗಳು, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರ ಸಹಕಾರದಿಂದ ಸ್ವಚ್ಛತಾ ಅಭಿಯಾನ ಶುರು ಮಾಡಲಾಗಿದೆ.


ಮೊದಲ ದಿನವಾದ ಶುಕ್ರವಾರ ತಾವರೆಕಟ್ಟೆ ಮುಖ್ಯ ದ್ವಾರದಿಂದ ಕೇವಲ ಒಂದು ಗಂಟೆಯಷ್ಟೇ ಸ್ವಚ್ಛತಾ ಅಭಿಯಾನ ನಡೆಸಿದ 15ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ತಂಡ 30 ಚೀಲ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದೆ. ಮಾ.21ರವರೆಗೂ ನಡೆಯಲಿದೆ. 18 ದಿನಗಳ ಕಾಲ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಸ್ವಚ್ಛತಾ ಕಾರ್ಯ ಜರುಗಲಿದೆ.


ಈ ವೇಳೆ ಆಸಕ್ತರು ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ಶ್ರಮದಾನ ಮಾಡಬಹುದಾಗಿದೆ. ಶುಕ್ರವಾರ ನಡೆದ ಅಭಿಯಾನದಲ್ಲಿ ಆರ್‌ಎಫ್‌ಒ ಧನ್ಯಾಶ್ರೀ, ಡಿಆರ್‌ಎಫ್‌ಒ ಸತೀಶ್‌ಕುಮಾರ್, ಗಾರ್ಡ್‌ಗಳಾದ ಅಪ್ಪಣ್ಣ, ಗಗನ್ ಹಾಗೂ 10 ಜನ ವಾಚರ್‌ಗಳು ಪಾಲ್ಗೊಂಡಿದ್ದರು.