ಮೈಸೂರು: ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಸೌಕರ್ಯ ಒದಗಿಸಬೇಕು. ವಿಐಪಿ ದರ್ಶನಕ್ಕೆಂದು ನಿಗದಿ ಮಾಡಿರುವ 2000 ರೂ. ಟಿಕೆಟ್ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಧ್ಯಕ್ಷ ಡಾ.ಬಿ.ಶಿವಣ್ಣ ಒತ್ತಾಯಿಸಿದರು.
ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಈ ವೇಳೆ ದರ್ಶನಕ್ಕೆ ತಾರತಮ್ಯ ಏಕೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬೆಟ್ಟಕ್ಕೆ ಬರುವವರಿಗೆ ಸರಿಯಾದ ಮೂಲಸೌಕರ್ಯ ಇಲ್ಲ. ಶೌಚಗೃಹದ ವ್ಯವಸ್ಥೆಯೂ ಅಸಮರ್ಪಕವಾಗಿದೆ. ಈ ಹಿಂದೆಂದೂ ದರ್ಶನಕ್ಕೆ 2 ಸಾವಿರ ರೂ. ಟಿಕೆಟ್ ನಿಗದಿ ಮಾಡಿದ ಇತಿಹಾಸವೇ ಇಲ್ಲ.
ವಿಐಪಿಗಳಿರಲಿ, ಜನಸಾಮಾನ್ಯರಿರಲಿ ಎಲ್ಲರಿಗೂ ದರ್ಶನಾವಕಾಶ ಕಲ್ಪಿಸುವುದು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಹೀಗಿರುವಾಗ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ತಿರುಪತಿ, ಕೊಲ್ಲೂರು, ಶೃಂಗೇರಿಗಳಲ್ಲಿಯಂತೆ ಚಾಮುಂಡಿ ಬೆಟ್ಟದ ದೇವಸ್ಥಾನವನ್ನೂ ಬೆಳಗ್ಗೆ 5ಕ್ಕೆ ಬಾಗಿಲು ತೆಗೆದರೆ ಎಲ್ಲರಿಗೂ ಸುಲಭ ದರ್ಶನವಾಗುತ್ತದೆ. ಇತ್ತ ಜಿಲ್ಲಾಡಳಿತ ಗಮನ ಹರಿಸಬೇಕು ಎಂದರು.
ಸಂಘದ ಪದಾಧಿಕಾರಿಗಳಾದ ನಾಗಸುಂದರ್, ಕುಮಾರ್, ಮಂಜುನಾಥ್, ಭಾಗ್ಯಮ್ಮ ಹಾಗೂ ಸ್ವಾಮಿನಾಯಕ ಇದ್ದರು.