ಜಿಲ್ಲೆ

ಚಾಮುಂಡಿಬೆಟ್ಟ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ

ಮೈಸೂರು: ಚಾಮುಂಡಿಬೆಟ್ಟದ ತಾವರೆಕಟ್ಟೆ ಬಳಿ ಬುಧವಾರ ನಡೆದ ಯುವಕನೊಬ್ಬನ ಹತ್ಯೆ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಬೆಳವಾಡಿ ಭರತ್ ಮತ್ತು ಗಿರಿದರ್ಶಿನಿ ಬಡಾವಣೆಯ ಸೂರ್ಯ ಕುಮಾರ್ ಬಂಧಿತರು. ಆರೋಪಿಗಳು ಗಿರಿದರ್ಶಿನಿ ಬಡಾವಣೆಯ ಲೋಕಿ ಎಂಬಾತನನ್ನು ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು. ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಆರೋಪಿಗಳ ನ್ನು ಪತ್ತೆ ಹಚ್ಚುವುದು ಕಗ್ಗಂಟಾಗಿತ್ತು.

ಹತ್ಯೆಗೀಡಾದ ಯುವಕನ ಮಾಹಿತಿ ಕಲೆಹಾಕಿದ ಪೊಲೀಸರು ನಂತರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ಕುಮಾರ್, ಭರತ್ ಹಾಗೂ ಲೋಕಿ ಸ್ನೇಹಿತರಾಗಿದ್ದರು. ಸೂರ್ಯಕುಮಾರ್‌ನ ಮೊಬೈಲ್‌ಅನ್ನು ಲೋಕಿ ಪಡೆದು ಬಳಸಿದ್ದ. ಇದರಿಂದ ಕೋಪಗೊಂಡ ಸೂರ್ಯಕುಮಾರ್ ಪಾರ್ಟಿ ನೆಪದಲ್ಲಿ ಚಾಮುಂಡಿಬೆಟ್ಟದ ತಾವರೆಕಟ್ಟೆಗೆ ಭರತ್ ಮೂಲಕ ಲೋಕಿಯನ್ನು ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.