ಜಿಲ್ಲೆ

ಚಾಮರಾಜನಗರ ಬಂದ್ ಯಶಸ್ವಿ

ಚಾಮರಾಜನಗರ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದಿರುವುದನ್ನು ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಶನಿವಾರ ಕರೆನೀಡಿದ್ದ ಚಾಮರಾಜನಗರ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ನಗರದ ಶ್ರೀಭವನೇಶ್ವರಿ ವೃತ್ತದಲ್ಲಿ ಮುಂಜಾನೆಯೇ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು. ನಂತರ ಶ್ರೀಭುವನೇಶ್ವರಿ ವೃತ್ತದಲ್ಲಿ ಸಂಜೆಯ ವರೆಗೂ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರು ದಲಿತರು ಎಂಬ ಕಾರಣಕ್ಕೆ ಮನುವಾದಿ ರಾಕೇಶ್ ಕಿಶೋರ್ ಶೂ ಎಸೆದಿದ್ದಾನೆ. ಈ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ದೇಶದಾದ್ಯಂತ ಈ ಹೋರಾಟವನ್ನು ವಿಸ್ತಾರ ಮಾಡಬೇಕು. ಜಿಲ್ಲೆಯಲ್ಲಿ ಅಂಬೇಡ್ಕರ್‌ವಾದಿಗಳ ಹೆಚ್ಚಾಗಿದ್ದು, ನಮ್ಮೊಳಗಿರುವ ಕಿಶೋರ್ ಅಂತವರ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ದೇಶದಾದ್ಯಂತ ಹಿಂದುಳಿದ ಮತ್ತು ದಲಿತ ಸಮುದಾಯದವರನ್ನು ಹಿಂದೂ ಎಂಬ ಹೆಸರಿನಲ್ಲಿ ವಂಚಿಸಲಾಗುತ್ತಿದೆ. ಖಾಸಗಿ ಕಂಪನಿ ಸಿಇಓಗಳನ್ನು ಐಎಎಸ್ ಹುದ್ದೆಗೆ ತಂದು ಕೂರಿಸುವ ಮೂಲಕ ಮನು ಸಂವಿಧಾನವನ್ನು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಉಳಿಸುವ ಸರ್ಕಾರಗಳನ್ನು ನಾವು ಬೆಂಬಲಿಸಬೇಕಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್, ಅಯ್ಯನಪುರ ಶಿವಕುಮಾರ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಆಲೂರು ಪ್ರದೀಪ್, ಆರ್.ಮಹದೇವ್, ನಲ್ಲೂರು ಸೋಮೇಶ್, ನಾಗಯ್ಯ, ನಾಯಕ ಸಮುದಾಯದ ಪು.ಶ್ರೀನಿವಾಸ್ ನಾಯಕ್, ಸುರೇಶ್ ನಾಯಕ್, ಚೆಂಗುಮಣಿ, ಕುರುಬ ಸಂಘದ ತಾಲೂಕು ಅಧ್ಯಕ್ಷ ಉಮೇಶ್, ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಮಹಮ್ಮದ್, ರವಿಬಿಸಲವಾಡಿ, ಬಿಎಸ್ಪಿ ಎನ್.ನಾಗಯ್ಯ, ಬ.ಮ.ಕೃಷ್ಣಮೂರ್ತಿ, ಅಹಿಂದ ರೇವಣ್ಣ, ಆರ್.ಎಂ.ರಾಜಪ್ಪ, ವಕೀಲರ ಸಂಘದ ಜಿಲ್ಲಾಧ್ಯಕ್ಷ ನಂಜಯ್ಯ, ಪುಟ್ಟಸ್ವಾಮಿ ರಾಮಸಮುದ್ರ, ಪ್ರಸನ್ನ ಕುಮಾರ್, ಭೀಮ್ರಾವ್ ಅಂಬೇಡ್ಕರ್ ಸೇನೆ ಅಧ್ಯಕ್ಷ ಗಣೇಶ್ ಪ್ರಸಾದ್, ಭಾಗ್ಯಮ್ಮ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ಅಂಗಡಿ-ಮುಂಗಟ್ಟುಗಳು ಬಂದ್:

ಸಂವಿಧಾನ ಸಂರಕ್ಷಣಾ ಸಮಿತಿ ಕರೆನೀಡಿದ್ದ ಬಂದ್‌ಗೆ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಚಿತ್ರಮಂದಿರ ಮಾಲೀಕರು, ಆಟೋ ಮತ್ತು ಲಾರಿ ಮಾಲೀಕರು ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳು ಬೆಂಬಲ ನೀಡಿದ್ದ ಪರಿಣಾಮವಾಗಿ ಪ್ರಮುಖ ರಸ್ತೆ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿತ್ತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಮತ್ತು ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿತ್ತು. ಶ್ರೀಭುವನೇಶ್ವರ ವೃತ್ತದ ನಾಲ್ಕೂ ರಸ್ತೆಗಳಿಗೂ ಬ್ಯಾಡಿಕೇಡ್ ಹಾಕಿದ್ದರಿಂದ ವಾಹನಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಆಟೋಗಳು ಮತ್ತು ದ್ವಿಚಕ್ರವಾಹನಗಳನ್ನು ಹೊರತುಪಡಿಸಿ ವಾಹನಗಳು ಸಂಚಾರ ವಿರಳವಾಗಿತ್ತು. ಮೈಸೂರು, ಕೊಳ್ಳೇಗಾಲ ಮತ್ತು ಕೊಯಮತ್ತೂರಿನ ಕಡೆಗೆ ಹೋಗುವ ವಾಹನಗಳು ಬೈಪಾಸ್ ರಸ್ತೆಯಲ್ಲಿ ಸಂಚರಿಸಿದವು. ಬಸ್‌ಗಳ ಸಂಚಾರವಿಲ್ಲದ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಂಜೆಯವರೆಗೂ ಪರದಾಡುವಂತಾಯಿತು.

ವಕೀಲನ ಗಡಿಪಾರು ಮಾಡಿ:

ರಾಷ್ಟ್ರದ ಸರ್ವೊಚ್ಚ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರಿಗೆ ಶೂ ಎಸೆಯುವ ಮೂಲಕ ಅವಮಾನ ಮಾಡಿರುವ ವಕೀಲನನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು. ಈ ಪ್ರಕರಣ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದ್ದು, ಇನ್ನೂ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಈ ವಿಚಾರವಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಕೇಂದ್ರ ಸರ್ಕಾರ ಆ ವ್ಯಕ್ತಿಯನ್ನ ದೇಶದ್ರೋಹಿ ಎಂದು ಪರಿಗಣಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸಂವಿಧಾನವನ್ನ ಬುಡಮೇಲು ಮಾಡುವ ಉದ್ದೇಶದಿಂದ ಇಂತಹ ಕೃತ್ಯ ನಡೆಯುತ್ತಿದೆ. ವಿಶ್ವ ಮಾನ್ಯತೆ ಪಡೆದ ಸಂವಿಧಾನ ನಮ್ಮದು. ಮೂರು ಪ್ರಮುಖ ಅಂಗಗಳಲ್ಲಿ ನ್ಯಾಯಾಂಗ ಬಹಳ ಪರಮೋಚ್ಛವಾಗಿದೆ. ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ಅತ್ಯಂತ ಖಂಡನೀಯ ಎಂದರು.