ಶೃಂಗೇರಿ: ಗುರುಪೂರ್ಣಿಮೆಯಾದ ಗುರುವಾರ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಗುರುನಿವಾಸದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡರು. ಹಿರಿಯ ಶ್ರೀಗಳು 51ನೇ ಚಾತುರ್ಮಾಸ್ಯ ವ್ರತ ಕೈಗೊಂಡರು. ನಾನಾ ಪ್ರಾಂತ್ಯಗಳಿಂದ ಆಗಮಿಸಿದ ಸದ್ಭಕ್ತರು ವ್ರತದ ಧಾರ್ಮಿಕವಿಧಿಗಳನ್ನು ಕಣ್ತುಂಬಿಕೊಂಡರು. ಸೆ.7ರತನಕ ಯತಿವರ್ಯರ ವ್ರತ ಮುಂದುವರಿಯಲಿದೆ.
ಚಾತುರ್ಮಾಸ್ಯ ಸಂಕಲ್ಪಗಿಂತಲೂ ಮೊದಲು ವ್ಯಾಸ ಪೂಜೆಯನ್ನು ಯತಿಗಳು ನೆರವೇರಿಸಿದರು. ಈ ಪೂಜೆಯನ್ನು ಮೂರು ಗುಂಪುಗಳ ಆಚಾರ್ಯರಿಗೆ ಸಲ್ಲಿಸಲಾಗುತ್ತದೆ. ಒಂದೊಂದು ಗುಂಪಿನಲ್ಲಿ ಐದು ಆಚಾರ್ಯರಿದ್ದು, ಕೃಷ್ಣ ಪಂಚಕ, ವ್ಯಾಸ ಪಂಚಕ ಹಾಗೂ ಶ್ರೀ ಶಂಕರಾಚಾರ್ಯ ಪಂಚಕ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೃಷ್ಣ ಪಂಚಕದಲ್ಲಿ ಶ್ರೀಕೃಷ್ಣ, ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತರನ್ನೂ, ವ್ಯಾಸ ಪಂಚಕದಲ್ಲಿ ಶ್ರೀ ವೇದವ್ಯಾಸರು, ಜೈಮಿನಿ ಮಹರ್ಷಿ, ವೈಶಂಪಾಯನ ಮಹರ್ಷಿ, ಸುಮಂತು ಮಹರ್ಷಿ ಹಾಗೂ ಆಚಾರ್ಯ ಪಂಚಕದಲ್ಲಿ ಶ್ರೀ ಶಂಕರಾಚಾರ್ಯ, ಶ್ರೀ ಸುರೇಶ್ವರಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯ, ಪದ್ಮಪಾದಾಚಾರ್ಯರನ್ನೂ ಪೂಜಿಸಲಾಗುತ್ತದೆ. ಈ ಮೂರೂ ಗುಂಪುಗಳ ಪಂಚಕಗಳಿಗೆ ಶ್ರೀಗಳು ಪ್ರತ್ಯೇಕವಾಗಿ ಪೂಜೆ ಸಲ್ಲಿಸಿದರು. ಬಳಿಕ ಶೃಂಗೇರಿ ಜಗದ್ಗುರು ಪರಂಪರಾ ಸ್ತೋತ್ರಗಳನ್ನು ಪಠಿಸಿ ಗುರುಪರಂಪರೆಯಲ್ಲಿ ಬರುವ ಯತಿವರೇಣ್ಯರಿಗೆ ಪೂಜೆ ಸಲ್ಲಿಸಲಾಯಿತು.
ಭಗವಾನ್ ಸದಾಶಿವನಿಂದ ಪ್ರಾರಂಭವಾಗುವ ಗುರುಪರಂಪರೆ ಮೂವತ್ತೈದನೇ ಜಗದ್ಗುರುಗಳ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿ ತನಕ ಪೂಜೆಯನ್ನು ಹಿರಿಯಶ್ರೀ ಭಾರತೀತೀರ್ಥ ಸ್ವಾಮೀಜಿ ನೆರವೇರಿಸಿದರು.
ಪೂಜಾವಿಧಿಗಳು ಮುಗಿದ ಬಳಿಕ ಜಗದ್ಗುರುಗಳು ಮಳೆಗಾಲದ ಸಮಯ ಸಣ್ಣ ಕ್ರಿಮಿ-ಕೀಟಗಳು ದಾರಿಯಲ್ಲಿ ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಶ್ರುತಿಯ ನಿರ್ದೇಶನದಂತೆ ಅವುಗಳಿಗೆ ಹಿಂಸೆ ನೀಡಬಾರದು ಎಂಬ ದೃಷ್ಟಿಯಿಂದ ನಾವು ಒಂದೇ ಸ್ಥಳದಲ್ಲಿ ಇರುತ್ತೇವೆ ಎಂದು ವಿಧ್ಯುಕ್ತವಾಗಿ ಚಾತುರ್ಮಾಸ್ಯ ಸಂಕಲ್ಪ ಕೈಗೊಂಡರು. ಆಗ ಶಿಷ್ಯರು ಗುರುಸೇವೆಯನ್ನು ಯಥಾಶಕ್ತಿಯಾಗಿ ಈ ಅವಧಿಯಲ್ಲಿ ನಿರ್ವಹಿಸುತ್ತೇವೆ. ಯತಿಗಳು ಸುಖವಾಗಿ ವಾಸ ಮಾಡಬೇಕು ಎಂದು ವಿನಂತಿಸಿಕೊಂಡರು. ನಂತರ ಗುರುಪಾದುಕೆಗಳಿಗೆ ಸಮಸ್ತ ಭಕ್ತರ ಪರವಾಗಿ ಮಠದ ಪುರೋಹಿತರು ಪೂಜೆ ನೆರವೇರಿಸಿದರು.
ಶೃಂಗಪುರ, ಸಚ್ಚಿದಾನಂದಪುರ, ನರಸಿಂಹಪುರ, ವಿದ್ಯಾರಣ್ಯಪುರದ ಜನರು ಶ್ರೀಗಳಿಗೆ ಕಾಣಿಕೆ ಸಮರ್ಪಿಸಿದರು. ಶೃಂಗೇರಿ ಶಾರದಾಪೀಠಕ್ಕೆ ರಾಜರು ನೀಡಿದ ದತ್ತಿ ಕಾಣಿಕೆಗಳನ್ನು ಆಡಳಿತಾಧಿಕಾರಿ ಪಿ.ಎ.ಮುರಳಿ ಅವರು ಯತಿಗಳಿಗೆ ಸಮರ್ಪಿಸಿದರು. ಯತಿಗಳು ಸಮಸ್ತ ಭಕ್ತರಿಗೆ ತೀರ್ಥ ನೀಡಿ ಅನುಗ್ರಹಿಸಿದರು. ಜು.11ರಂದು ಪುನಃ ಶ್ರೀಗಳು ಗುರುಪರಂಪರೆಗೆ ಪೂಜೆ ಸಲ್ಲಿಸುತ್ತಾರೆ. ಪೂಜೆ ಬಳಿಕ ಭಕ್ತರಿಗೆ ಪ್ರಸಾದ, ವ್ಯಾಸಾಕ್ಷತೆ ನೀಡುತ್ತಾರೆ.
ಗುರುಪೂರ್ಣಿಮೆ ಎಂದು ಕರೆಯಲ್ಪಡುವ ಆಷಾಢ ಮಾಸದ ಹುಣ್ಣಿಮೆ ಪವಿತ್ರ ದಿನ. ಅನಾದಿಕಾಲದಿಂದ ಬ್ರಹ್ಮವಿದ್ಯೆಯನ್ನು ಉಪದೇಶಿಸಿದ ಗುರುಪರಂಪರೆಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಆಚಾರ್ಯ ಪರಂಪರೆಯಲ್ಲಿ ಅಗ್ರಗಣ್ಯರು ಶ್ರೀ ವೇದವ್ಯಾಸರು. ಅವರು ವೇದಗಳನ್ನು ರಚಿಸಿ ನಾಲ್ಕು ಭಾಗಗಳಾಗಿ ವಿಂಗಡಿಸಿದವರು. ಪಂಚಮ ವೇದಗಳೆಂದು ಕರೆಯುವ ಮಹಾಭಾರತ, ಅಷ್ಟಾದಶ ಮಹಾಪುರಾಣ, ಬ್ರಹ್ಮಸೂತ್ರವನ್ನು ರಚಿಸಿದವರು. ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಚಾತುರ್ಮಾಸ್ಯ ಕಾಲದಲ್ಲಿ ಗುರುನಿವಾಸದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವ ಯತಿಗಳು ಒಂದೇ ಸ್ಥಳದಲ್ಲಿ ನೆಲೆಸಿ ಪರತತ್ವವನ್ನು ಚಿಂತನೆ ಮಾಡುತ್ತ ಶಿಷ್ಯರಿಗೆ ಅಧ್ಯಾತ್ಮ ವಿದ್ಯೆಯನ್ನು ಉಪದೇಶಿಸುತ್ತಾರೆ.