ತುಮಕೂರು: ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಚಾಕುವಿನಿಂದ ಚುಚ್ಚಿ ಪತಿಯೇ ಕೊಲೆಗೈದಿದ್ದಾನೆ. ಗೀತಾ (30) ಮೃತೆ. ಪತಿ ಕೊರಟಗೆರೆ ತಾಲೂಕು ಅಮೃತಗಿರಿಯ ನವೀನ್ ಕೊಲೆ ಆರೋಪಿ. ತುಮಕೂರು ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ ಮಂಡ್ಯ ಜಿಲ್ಲೆ ಗಣನೂರು ಗ್ರಾಮದ ಗೀತಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಬಳಿಕ ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗು ಇದೆ. ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಲೇ ಇದ್ದವು, ಶನಿವಾರ ರಾತ್ರಿ ಕೂಡ ಇಬ್ಬರ ನಡುವೆ ಜೋರು ಗಲಾಟೆಯಾಗಿದ್ದು, ಪತ್ನಿ ಗೀತಾಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿ ನವೀನ್ ನಾಪತ್ತೆಯಾಗಿದ್ದಾನೆ. ಭಾನುವಾರ ಬೆಳಗ್ಗೆ ಸ್ಥಳಿಯರ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.