ಬೈಲಹೊಂಗಲ (ಬೆಳಗಾವಿ): ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರ ಬರ್ಬರ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ದುಂಡನಕೊಪ್ಪ ಗ್ರಾಮದ ಮಾಯಪ್ಪ ಹಳೇಗೋಡಿ (20) ಸ್ಥಳದಲ್ಲೇ ಮೃತಪಟ್ಟರೆ, ಸಹೋದರ ಯಲ್ಲಪ್ಪ ಹಳೇಗೋಡಿ (22) ಚಿಕಿತ್ಸೆ ಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೊಲೆ ಆರೋಪಿ ಕೀರಪ್ಪ ಬಾವಿಹಾಳ (50) ಪರಾರಿಯಾಗಿದ್ದಾನೆ.
ಎಷ್ಟೇ ಬುದ್ಧಿ ಹೇಳಿದರೂ ಕೇಳದೆ ಪ್ರೀತಿಸು ಎಂದು ಯುವತಿಯ ಬೆನ್ನು ಬಿದ್ದಿದ್ದರಿಂದ ಕುಪಿತಗೊಂಡ ಯುವತಿಯ ತಂದೆಯು ಮಾಯಪ್ಪ ಹಳೇಗೋಡಿ ಎಂಬ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಯಲ್ಲಪ್ಪನನ್ನೂ ಚಾಕುವಿನಿಂದ ಚುಚ್ಚಿದ್ದಾನೆ.
ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗಯ್ಯ, ಪಿಐ ವೀರೇಶ ಮಠಪತಿ, ಸಿಬ್ಬಂದಿ ಭೇಟಿ ಪರಿಶೀಲಿಸಿದರು. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.