ಆಲೂರು: ತಾಲೂಕಿನ ಮಗ್ಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಕುಂದೂರು ಗ್ರಾಮದ ಭರತ್ (28) ಕೊಲೆಯಾದ ಯುವಕ.
ಘಟನೆ ವಿವರ: ಕುಂದೂರು ಗ್ರಾಮದ ನಿವಾಸಿ ಭರತ್ ಮಂಗಳವಾರ ಸಂಜೆ ಮಗ್ಗೆ ಗ್ರಾಮಕ್ಕೆ ತೆರಳಿದ್ದ, ಆ ಸಂದರ್ಭದಲ್ಲಿ ಸ್ನೇಹಿತರಾದ ಕಳ್ಳಿಕೊಪ್ಪಲು ಗ್ರಾಮ ಕಡ್ಲ ಭರತ, ಸತೀಶ್ ಅಲಿಯಾಸ್ ಗುಂಡ, ಗಂಗರ ಗ್ರಾಮದ ಕಿರಣ, ಕಾಣಿಗೆರೆ ಗ್ರಾಮದ ಕೌಶಿಕ್ ಹಾಗೂ ಚನ್ನಾಪುರ ಗ್ರಾಮದ ನೇಮ ಅವರೊಂದಿಗೆ ಸೇರಿ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ. ನಂತರ ರಾತ್ರಿ 12 ಗಂಟೆ ಸಮಯದಲ್ಲಿ ಮನೆಗೆ ಹಿಂತಿರುಗುವಾಗ ಮಗ್ಗೆ ಗ್ರಾಮದಲ್ಲಿ ಬಸವರಾಜು ಎಂಬುವರ ಮನೆಯ ಗೇಟ್ ಬಳಿ ಭರತನನ್ನು ಅಡ್ಡಗಟ್ಟಿದ ಆರೋಪಿಗಳು ಚಾಕುವಿನಿಂದ ಎಡಭಾಗದ ಪಕ್ಕೆಗೆ ಚುಚ್ಚಿ ನಂತರ ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ತುಳಿದಿದ್ದಾರೆ. ತೀವ್ರ ಗಾಯಗೊಂಡ ಭರತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಆರೊಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ಕೊಲೆಗೆ ಬಳಸಿದ್ದ ಚಾಕು ಹಾಗೂ ಬೈಕ್ ಕೊಲೆಯಾದ ಸ್ಥಳದಲ್ಲೇ ಸಿಕ್ಕಿದೆ.
ನನ್ನ ಪತಿಯ ಕೊಲೆಗೆ ಕಾರಣರಾದ ಆರೋಪಿಗಳಾದ ಕಳ್ಳಿಕೊಪ್ಪಲು ಗ್ರಾಮದ ಸತೀಶ್ ಅಲಿಯಾಸ್ ಗುಂಡ, ಗಂಗರ ಗ್ರಾಮದ ಕಿರಣ, ಕಾಣಿಗೆರೆ ಗ್ರಾಮದ ಕೌಶಿಕ್ ಹಾಗೂ ಚನ್ನಾಪುರ ಗ್ರಾಮದ ನೇಮ ಎಂಬುವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಭರತನ ಪತ್ನಿ ಚೈತ್ರಾ ದೂರಿನಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಆಲೂರು ಠಾಣೆಯ ಸಬ್ ಇನ್ಸ್‌ಸ್ಪೆಕ್ಟರ್ ಗಣೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.