ಜಿಲ್ಲೆ

ಚಾಕುವಿನಿಂದ ಇರಿದು ಯುವಕನ ಕೊಲೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬೆಂಗಳೂರು ಉತ್ತರ ತಾಲೂಕಿನ ಸೊಂಡೇಕೊಪ್ಪ ಗ್ರಾಮದಲ್ಲಿ ಬುಧವಾರ ತಡರಾತ್ರಿ ಯುವಕನನ್ನು ದುಷ್ಕರ್ಮಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೊಂಡೇಕೊಪ್ಪ ಗ್ರಾಮದ ಮೊಹಮ್ಮದ್ ರೆಹಮಾನ್(18) ಕೊಲೆಯಾದವ. ಅದೇ ಗ್ರಾಮದ ರೇಣುಕಾಪ್ರಸಾದ್(33) ಬಂಧಿತ.
ಕಾಚೋಹಳ್ಳಿ ಸಮೀಪದ ವೆಲ್ಡಿಂಗ್ ಅಂಗಡಿಯಲ್ಲಿ ರೆಹಮಾನ್ ಕೆಲಸ ಮಾಡುತ್ತಿದ್ದು, ಆ.28ರ ರಾತ್ರಿ 9.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ದ್ವಿಚಕ್ರವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದ. ಈ ವೇಳೆ ಸೊಂಡೇಕೊಪ್ಪದ ಗ್ರಾಪಂ ಬಳಿ ರೇಣುಕಾಪ್ರಸಾದ್ ಹಾಗೂ ಆತನ ಸ್ನೇಹಿತ, ಅಡ್ಡ ಹಾಕಿ ಅವಾಚ್ಯವಾಗಿ ನಿಂದಿಸಿದಲ್ಲದೇ ರೆಹಮಾನ್ ಎದೆಭಾಗಕ್ಕೆ ರೇಣುಕಾಪ್ರಸಾದ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೆಹಮಾನ್‌ನ್ನು ಸಂಬಂಧಿಕರು ಹಾಗೂ ಸ್ಥಳೀಯರು ಆಟೋದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಮಾರ್ಗಮಧ್ಯೆಯೇ ರೆಹಮಾನ್ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬು ಭೇಟಿ ನೀಡಿ, ಪರಿಶೀಲನೆ ನಡೆಸಿದರು.


ಒಂದೇ ಗಂಟೆಯಲ್ಲಿ ಬಂಧನ: ರೇಣುಕಾಪ್ರಸಾದ್ ಮೊಬೈಲ್ ನೆಟ್‌ವರ್ಕ್ ಆಧರಿಸಿ ಕೃತ್ಯ ನಡೆದ ಒಂದು ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಶೋಧ ಮುಂದುವರಿದಿದೆ.
ಹಳೇ ವೈಷಮ್ಯವೇ ಕಾರಣ?: ಆ.25ರಂದು ರೆಹಮಾನ್‌ನ ಹುಟ್ಟುಹಬ್ಬವಿತ್ತು. ಅದೇದಿನ ರೆಹಮಾನ್ ಮನೆ ಮುಂದಿನ ರಸ್ತೆಯಲ್ಲಿ ರೇಣುಕಾಪ್ರಸಾದ್ ಕಾರು ನಿಲ್ಲಿಸಿದ್ದ. ಆಗ ಕಾರು ತೆಗೆಯುವಂತೆ ರೆಹಮಾನ್ ಹೇಳಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಚಾರವಾಗಿ ದ್ವೇಷ ಇಟ್ಟುಕೊಂಡಿದ್ದ ರೇಣುಕಾಪ್ರಸಾದ್ ಕೊಲೆ ಮಾಡಿದ್ದಾನೆ ಎಂದು ರೆಹಮಾನ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.