ಕೆ.ಆರ್.ಸಾಗರ: ಕೆ.ಆರ್.ಸಾಗರ ಮುಖ್ಯರಸ್ತೆಯಲ್ಲಿರುವ ನಾರ್ತ್‌ಬ್ಯಾಂಕ್ ಬಳಿಯ ಮೀನು ಮಾರಾಟ ಕೇಂದ್ರದಲ್ಲಿ ಭಾನುವಾರ ಸಂಜೆ ಮೀನು ತಿನ್ನುತ್ತಿದ್ದ ವ್ಯಕ್ತಿಗೆ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಪಾಂಡವಪುರ ತಾಲೂಕಿನ ಕುಂಬಾರ ಕೊಪ್ಪಲು ಗ್ರಾಮದ ಅರುಣ (35) ಹಲ್ಲೆಗೊಳಗಾದವರು. ಈತನ ಸ್ನೇಹಿತ ಸಣಬ ಗ್ರಾಮದ ವಿನಯ್ ಹಲ್ಲೆ ಆರೋಪಿ. ಈ ಇಬ್ಬರು ವಾಹನ ಚಾಲಕರಾಗಿದ್ದು, ಭಾನುವಾರ ಸಂಜೆ ನಾರ್ತ್‌ಬ್ಯಾಂಕ್ ಬಳಿಯ ಮೀನು ಮಾರಾಟ ಕೇಂದ್ರದಲ್ಲಿ ಒಟ್ಟಿಗೆ ಮದ್ಯ ಸೇವಿಸಿ ಮೀನು ತಿನ್ನುತ್ತಿದ್ದರು. ಈ ಸಂದರ್ಭದಲ್ಲಿ ಅರುಣ, ವಿನಯಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಮದ್ಯದ ಅಮಲಿನಲ್ಲಿದ್ದ ವಿನಯ್ ಕೋಪಗೊಂಡು ಮೀನು ಸ್ವಚ್ಛಗೊಳಿಸಲು ಇಟ್ಟಿದ ಚಾಕುವಿನಿಂದ ಅರುಣನ ಹೊಟ್ಟೆಗೆ ಇರಿದು ಹಲ್ಲೆ ನಡೆಸಿದ್ದಾನೆ. ತಕ್ಷಣ ಸ್ಥಳೀಯರು ಕೆ.ಆರ್.ಸಾಗರ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಪಿಎಸೈ ರಮೇಶ ಕರಕಿಕಟ್ಟಿ ಮತ್ತು ಸಿಬ್ಬಂದಿ ಆರೋಪಿ ವಿನಯ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅರುಣನನ್ನು ತುರ್ತು ವಾಹನದಲ್ಲಿ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಿದರು.