ಬೀದರ್: ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ, ಭಾಗವತ ಕಥಾ ಹಾಗೂ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಶ್ರದ್ಧೆ, ಭಕ್ತಿಯಿಂದ ನಡೆದಿದೆ.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪಾಂಡುರಂಗ ಮಂದಿರ ಹಾಗೂ ಮಹಾದೇವ ಮಂದಿರ ಆವರಣದಲ್ಲಿ ನಿತ್ಯ ನಡೆದಿರುವ ಕಾಕಡಾ, ಭಜನೆ, ಕೀರ್ತನೆ, ಹರಿ ಪಾಠ, ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಪಾಲ್ಗೊಳ್ಳುತ್ತಿದ್ದಾರೆ.
ನಾಮದೇವ ಮಹಾರಾಜ ಶಾಸ್ತ್ರಿ ಅವರು ನಡೆಸಿಕೊಡುತ್ತಿರುವ ಭಾಗವತ ಕಥಾ ಅನ್ನು ಆಸಕ್ತಿಯಿಂದ ಆಲಿಸುತ್ತಿದ್ದಾರೆ.
ಭಾಗವತ ಕಥಾ ಪ್ರಯುಕ್ತ ಮುಖಂಡ ದೀಪಕ ಪಾಟೀಲ ಚಾಂದೋರಿ ದಂಪತಿ, ಅರ್ಜುನ ಬಿರಾದಾರ ಚಾಂದೋರಿ, ಕೃಷ್ಣ ಬಿರಾದಾರ ಚಾಂದೋರಿ, ಸುನೀಲ್ ಜಾಧವ್ ಚಾಂದೋರಿ, ಕೇಶವ್ ಬಿರಾದಾರ ಹಾಗೂ ಆತ್ಮಾರಾಮ ಬಿರಾದಾರ ಅವರು ವಿಶೇಷ ಪೂಜೆ ಸಲ್ಲಿಸಿದರು.
ಸಪ್ತಾಹದಲ್ಲಿ ನಿತ್ಯ ನಸುಕಿನ ಜಾವ 4 ರಿಂದ 5 ರ ವರೆಗೆ ಕಾಕಡಾ, ಬೆಳಿಗ್ಗೆ 7 ರಿಂದ 10 ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ 12 ರಿಂದ 2 ಗಾಥಾ ಭಜನೆ, ಮಧ್ಯಾಹ್ನ 3 ರಿಂದ ಸಂಜೆ 5.30 ಭಾಗವತ ಕಥಾ, ಸಂಜೆ 6 ರಿಂದ 7 ಹರಿ ಪಾಠ, ರಾತ್ರಿ 9 ರಿಂದ 11 ಹರಿ ಕೀರ್ತನ, ರಾತ್ರಿ 12 ರಿಂದ ನಸುಕಿನ ಜಾವ 4 ರ ವರೆಗೆ ಹರಿ ಜಾಗರಣೆ ಜರುಗುತ್ತಿದೆ. ಡಿ. 21 ರಂದು ಸಪ್ತಾಹ ಸಮಾರೋಪಗೊಳ್ಳಲಿದೆ.
ಭಕ್ತರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಛತ್ರಪತಿ ಗಣೇಶ ಮಂಡಳ ಪದಾಧಿಕಾರಿಗಳು ವ್ಯವಸ್ಥೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಖಂಡ ಹರಿನಾಮ ಸಪ್ತಾಹ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.