ಜಿಲ್ಲೆ

ಚಾ.ನಗರ ವಿವಿಗೆ ಅಂಬೇಡ್ಕರ್ ಹೆಸರಿಡಲು ಆಗ್ರಹ

ಚಾಮರಾಜನಗರ : ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಬೇಕು ಎಂದು ಹಿರಿಯ ಸಾಹಿತಿ ಬಿಸಲವಾಡಿ ಸೋಮಶೇಖರ್ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಆಗ್ರಹಿಸಿದರು.

ಮೈಸೂರು ವಿಶ್ವ ವಿದ್ಯಾಲಯದ ಉಪ ಕೇಂದ್ರವಾಗಿ 2010-11 ನೇ ಸಾಲಿನಲ್ಲಿ ಚಾಮರಾಜನಗರದಲ್ಲಿ ಆರಂಭಗೊಂಡ ಸ್ನಾತಕೋತ್ತರ ಕೇಂದ್ರವನ್ನು 2015 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಎಂದು ಅಂಗೀಕರಿಸಲಾಗಿತ್ತು. ಸುಮಾರು 53 ಎಕರೆ ವಿಸ್ತೀರ್ಣದಲ್ಲಿರುವ ಸ್ನಾತಕೋತ್ತರ ಕೇಂದ್ರವನ್ನು 2023 ಮಾ.28 ರಂದು ರಾಜ್ಯ ಸರ್ಕಾರವು ಚಾಮರಾಜನಗರ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ 7 ವರ್ಷಗಳು ನಡೆಸಲ್ಪಟ್ಟ ಸ್ನಾತಕೋತ್ತರ ಕೇಂದ್ರದ ಹೆಸರನ್ನು ಕೈಬಿಟ್ಟು ಚಾಮರಾಜನಗರ ವಿಶ್ವ ವಿದ್ಯಾಲಯ ಹೆಸರಿನಿಂದ ಸ್ಥಾಪಿಸಿರುವುದು ನೋವಿನ ಸಂಗತಿಯಾಗಿದೆ. ರಾಯಚೂರು ವಿಶ್ವವಿದ್ಯಾಲಯಕ್ಕೆ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರು ನಾಮಕರಣಗೊಳಿಸಿರುವಂತೆ, ಚಾಮರಾಜನಗರ ವಿಶ್ವ ವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ವಿದ್ಯಾಲಯ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಜನಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ದಸಂಸ ಸಂಚಾಲಕ ದೊರೆಸ್ವಾಮಿ, ನಂಜುಂಡಸ್ವಾಮಿ, ಶಿವಕುಮಾರ್,ಮಾಡ್ರಳ್ಳಿ ರಂಗಸ್ವಾಮಿ ಹಾಜರಿದ್ದರು.

ವಾಜಮಂಗಲ ಕೃತ್ಯಕ್ಕೆ ಖಂಡನೆ:

ಮೈಸೂರಿನ ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಅಪಮಾನ ಮಾಡಿರುವ ಘಟನೆ ಅತ್ಯಂತ ಖಂಡನೀಯವಾಗಿದೆ. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಇಂತಹ ಕೃತ್ಯ ನಡೆದಿರುವುದರ ಹಿಂದೆ ಅವರದ್ದೇ ಕಾರ್ಯಕರ್ತರ ಕೈವಾಡವಿರಬಹುದು. ಆ ಕಾರಣಕ್ಕೆ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವವರನ್ನು ಇಂದಿಗೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ದಸಂಸ ಮುಖಂಡರು ಆರೋಪಿಸಿದರು. ಕೂಡಲೇ ಆರೋಪಿಗಳನ್ನು ಬಂಧಿಸಿ ಅವರಿಗೆ ಕಠಿಣಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.