ಜಿಲ್ಲೆ

ಚಾ.ನಗರ ವಿವಿ ರಾಷ್ಟ್ರೀಯ ವಾರ್ಷಿಕ ಶಿಬಿರ ಆರಂಭ

ಚಾಮರಾಜನಗರ: ಇಂದಿನ ವಿದ್ಯಾರ್ಥಿಗಳು ಕೇವಲ ಅಂಕವೀರರಾಗಿ ಉದ್ಯೋಗ ಪಡೆದುಕೊಳ್ಳಲು ಹಂಬಲಿಸುತ್ತಿದ್ದಾರೆ. ಆದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅಗತ್ಯವಾದ ಸಂಸ್ಕಾರ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದಿಂದ ವತಿಯಿಂದ ಎಂಟು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ವಾರ್ಷಿಕ ಸೇವಾ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಭಾಗದಲ್ಲಿ ನಡೆಯಲಿರುವ ಶಿಬಿರಗಳಲ್ಲಿ ಪಾಲ್ಗೊಂಡು ಹಳ್ಳಿಗಾಡಿನ ಬದುಕು, ಅವರ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಯಲು ಪ್ರಯತ್ನಿಸಬೇಕು. ಇದರಿಂದ ಮುಂದೆ ಯುವಕರು ಉತ್ತಮ ನಾಯಕತ್ವ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಚಾಮರಾಜನಗರ ವಿವಿಯಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ವಿಜಿ ಸಿದ್ದರಾಜು, ಸರ್ಕಾರಿ ವಕೀಲ ಅರುಣ್ ಕುಮಾರ್, ಸರ್ಕಾರಿ ಪ್ರೌಢಶಾಲೆಯ ಬಸವರಾಜು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರಸ್ವಾಮಿ, ಗೌಡಿಕೆ ಬಸವಣ್ಣ, ಗ್ರಾಪಂ ಸದಸ್ಯರಾದ ಎಸ್.ಬಸವಣ್ಣ, ಮಂಗಳಮ್ಮ, ನೀಲಮ್ಮ ಪ್ರಾಧ್ಯಾಪಕ ಗುರುರಾಜ್, ಮುನಿಸ್ವಾಮಿ ಗೋವಿಂದೇಗೌಡ, ಪಿಡಿಒ ಉಮೇಶ್, ಶಿವಯ್ಯ ಇತರರು ಇದ್ದರು.