ಜಿಲ್ಲೆ

ಚಾ.ನಗರ ದಸರಾ ಆಚರಣೆಗೆ ಮನವಿ

ಚಾಮರಾಜನಗರ: ಕಳೆದ ವರ್ಷ ಬಹಳ ವಿಜೃಂಭಣೆಯಿಂದ ಚಾಮರಾಜನಗರ ದಸರಾ ಮಹೋತ್ಸವ ಆಚರಿಸಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿದ್ದು, ನಿಮ್ಮ ಅಧಿಕಾರದ ಅವಧಿಯಲ್ಲೇ ದಸರಾ ಆಚರಣೆ ನಿಲ್ಲುವುದು ಬೇಡ ಎಂದು ಜಿಲ್ಲಾ ಕಲಾವಿದರ ಬಳಗದಿಂದ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಲ್ಲಿ ಮನವಿ ಮಾಡಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿ ಮಾತನಾಡಿದ ಕಲಾವಿದರು, ಸಾಕಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆದುಕೊಂಡು ಬಂದಿದೆ. ಕಳೆದ ವರ್ಷ ನಿಮ್ಮ ಅವಧಿಯಲ್ಲಿ ಬಹಳ ಅಚ್ಚುಕಟ್ಟಾಗಿ ದಸರಾ ಮಹೋತ್ಸವ ಆಚರಣೆ ಮಾಡುವ ಮೂಲಕ ಸಾವಿರಾರು ಕಲಾವಿದರಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ. ಅದರಂತೆ ಈ ಬಾರಿಯೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ದಸರಾ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪ್ರತಿಕ್ರಿಯಿಸಿ, ಸರ್ಕಾರ ಮಟ್ಟದಲ್ಲಿ ಅನುದಾನ ಬಿಡುಗಡೆ ಮಾಡದೇ ದಸರಾ ಆಚರಣೆ ಮಾಡಲು ಸಾಧ್ಯವಿಲ್ಲ. ಆದರೇ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಲ್ಲಿ ಮನವಿ ಮಾಡಿದ್ದು, ಚಾಮರಾಜನಗರ ದಸರಾ ಆಚರಣೆ ಮಾಡುವಂತೆ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ಇದ್ದು, ಅಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಆಚರಣೆ ಸಂಬಂಧ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಿಸಲವಾಡಿ ಸೋಮಸೇಖರ್, ಹಿರಿಯ ರಂಗಭೂಮಿ ಕಲಾವಿದ ಮಂಗಲ ಶಿವಣ್ಣ, ಗಾಯಕ ಉಮ್ಮತ್ತೂರು ಚಂದ್ರು, ಶಿವಶಂಕರ್ ಚಟ್ಟು, ದಡದಹಳ್ಳಿ ರಮೇಶ್, ಸುಶೀಲಾ ರಾಮಸಮುದ್ರ ಹಾಗೂ ಇತರರು ಹಾಜರಿದ್ದರು.