ಜಿಲ್ಲೆ

ಚಾ.ನಗರ-ಗುಂಡ್ಲುಪೇಟೆ ರಸ್ತೆ ವಿಸ್ತರಣೆ ನನೆಗುದಿಗೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲಾ ಕೇಂದ್ರದಿಂದ ಗುಂಡ್ಲುಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ವಿಸ್ತರಣೆ ನನೆಗುದಿಗೆ ಬಿದ್ದಿದ್ದು, ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರ ದುಸ್ಥರವಾಗಿದೆ.

ಚಾ.ನಗರದಿಂದ ಗುಂಡ್ಲುಪೇಟೆ ವರೆಗಿನ ಸುಮಾರು 33 ಕಿ.ಮೀ ರಾಜ್ಯ ಹೆದ್ದಾರಿಯನ್ನು 2017 ರಲ್ಲಿ ಅಂದಿನ ಸಂಸದ ದಿ.ಆರ್.ಧ್ರುವನಾರಾಯಣ್ ಅವರ ದೂರದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. 2018 ರಲ್ಲಿ ರಸ್ತೆಯನ್ನು ವಿಸ್ತರಣೆ ಮಾಡುವ ಸಂಬಂಧ ಸುಮಾರು 156 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಕೂಡ ಸಿದ್ಧಪಡಿಸಲಾಗಿತ್ತು. ಆದರೆ ಅಂದಿನಿಂದ ಈ ವರೆಗೂ ಹೆದ್ದಾರಿಯನ್ನು ವಿಸ್ತರಿಸದೇ ವಾಹನ ಸವಾರರು ಹಾಗೂ ಸಾರ್ವಜನಿಕರು ಜೀವವನ್ನು ಕೈಯಲ್ಲಿಡಿದು ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಈ ರಸ್ತೆ ಮಾರ್ಗದಲ್ಲೇ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ ಇರುವುದರಿಂದ ಗುಂಡ್ಲುಪೇಟೆ ವೃತ್ತದಿಂದ ಸಿಮ್ಸ್ ಆಸ್ಪತ್ರೆ ತಿರುವಿನವರೆಗೆ ಸಂಚರಿಸುವುದೇ ಕಷ್ಟವಾಗಿದೆ. ಕಿರಿದಾದ ರಸ್ತೆಯಲ್ಲಿ ಸಾಕಷ್ಟು ಬಾರಿ ಟ್ರಾಫಿಕ್ ಸಮಸ್ಯೆ ಉಂಟಾಗಿ, ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಗಾಗ್ಗೆ ಹೆದ್ದಾರಿಗೆ ಕೇವಲ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆಯೇ ವಿನಃ ರಸ್ತೆ ವಿಸ್ತರಣೆಯ ಕುರಿತು ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ವಿಸ್ತರಣೆಗೆ ಗಮನನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸಿಮ್ಸ್‌ಗೆ ಹೋಗುವವರಿಗೆ ಸಮಸ್ಯೆ:

ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿಯಿಂದ ಸಿಮ್ಸ್ ಆಸ್ಪತ್ರೆಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತೆರಳುತ್ತಾರೆ. ನಿತ್ಯವೂ ಹತ್ತಾರು ಆಂಬುಲೆನ್ಸ್‌ಗಳು ಸಂಚಾರ ಮಾಡುತ್ತದೆ. ಹೆದ್ದಾರಿ ವಿಸ್ತರಣೆ ಕಾಣದೇ ನಿರಂತರ ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆ ವಿಸ್ತರಣೆಯಾಗದೇ ಆಸ್ಪತ್ರೆಗೆ ರೋಗಿಗಳು ಹೋಗುವುದರಿಂದ ಸಕಾಲದಲ್ಲಿ ಅವರನ್ನು ಕರೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾದ ಸಮಯದಲ್ಲಿ ಜನರು ಹಿಡಿಶಾಪ ಹಾಕುವುದು ತಪ್ಪದಾಗಿದೆ.

ಸಂಚಾರಕ್ಕೆ ತೊಂದರೆ:

ಚಾ.ನಗರದಿಂದ ವೀರನಪುರ ಶಿವಪುರ ಗ್ರಾಮದವರೆಗೂ ರಸ್ತೆ ಕಿರಿದಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರಂತೂ ಜೀವವನ್ನು ಕೈಯಲ್ಲಿಡಿದು ಸಂಚಾರ ಮಾಡಬೇಕಿದೆ. ರಸ್ತೆಯ ಅಲ್ಲಲ್ಲಿ ಗುಂಡಿಬಿದ್ದಿದ್ದು, ಮಳೆ ಬಂದರಂತೂ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ರಸ್ತೆಯಲ್ಲಿ ಬೃಹತ್ ಗಾತ್ರ ಟಿಪ್ಪರ್‌ಗಳು ಸಂಚಾರ ಮಾಡುವುದರಿಂದ ಬಹುಬೇಗ ಡಾಂಬರು ಕಿತ್ತು ಬರುತ್ತಿದೆ. ಬೃಹತ್ ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ತುಂಬಿಕೊಂಡು ಹೋಗುವ ಜೆಲ್ಲಿ, ಮರಳು ರಸ್ತೆಯಲ್ಲಿ ಬಿದ್ದು ಸಣ್ಣ-ಪುಟ್ಟ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತದೆ. ರಿಂಗ್‌ರೋಡ್‌ನಿಂದ ಉತ್ತುವಳ್ಳಿ ಗ್ರಾಮಕ್ಕೆ ಹೋಗುವವರೆಗೂ ರಸ್ತೆ ತಗ್ಗಿನಿಂದ ಕೂಡಿದ್ದು, ಇದರಿಂದಾಗಿಯೇ ಸಾಕಷ್ಟು ವಾಹನಗಳು ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಹೋಗುವ ಆಂಬುಲೆನ್ಸ್ ಹಾಗೂ ಇನ್ನಿತರೆ ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ. ಗುಂಡ್ಲುಪೇಟೆ ವೃತ್ತದಿಂದ ಸಿಮ್ಸ್ ಆಸ್ಪತ್ರೆಯ ತಿರುವಿನವರೆಗೂ ರಸ್ತೆಯನ್ನು ವಿಸ್ತರಣೆ ಮಾಡಿದರೇ ಅನುಕೂಲವಾಗಲಿದೆ ಎಂಬುದು ವಾಹನಚಾಲಕರ ಅಭಿಪ್ರಾಯವಾಗಿದೆ.

ಅಪಘಾತಗಳು ಹೆಚ್ಚಳ:

ಗುಂಡ್ಲುಪೇಟೆ ವೃತ್ತದಿಂದ ಸಿಮ್ಸ್ ಆಸ್ಪತ್ರೆಗೆ ತೆರಳುವ ವೃತ್ತದವರೆಗೂ ಬಹಳ ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಬೇಕಿದೆ. ನಡುವೆ ಉತ್ತುವಳ್ಳಿ ಗ್ರಾಮ ಹಾಗೂ ಗಾರ್ಮೆಂಟ್ಸ್ ಬರುವುದರಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಹಾಗೂ ಇನ್ನಿತರೆ ವಾಹನಗಳ ಅಪಘಾತ ಹೆಚ್ಚಾಗುತ್ತಿದೆ. ಹಲವರು ಮೃತಪಟ್ಟಿರುವುದು ಕಂಡುಬಂದಿದೆ. ಗುಂಡ್ಲುಪೇಟೆ ವೃತ್ತದಿಂದ ರಿಂಗ್ ರಸ್ತೆಗೆ ಬರುವವರೆಗೂ ಟ್ರಾಫಿಕ್ ಸಮಸ್ಯೆ ಸರ್ವೇಸಾಮಾನ್ಯವಾಗಿದ್ದು ವಾಹನ ಸವಾರರು, ಪಾದಚಾರಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಮೌಲಾನ್ ಆಜಾದ್ ಶಾಲೆಯ ಮುಂಭಾಗ ರಸ್ತೆ ಗುಂಡಿಮಯವಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

2018 ರಲ್ಲೇ ಡಿಪಿಆರ್ ತಯಾರಿ:

ಗುಂಡ್ಲುಪೇಟೆ-ಚಾಮರಾಜನಗರ ನಡುವಿನ ರಾಜ್ಯ ಹೆದ್ದಾರಿ 81ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು 2018 ರಲ್ಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಯೋಜನೆ ಬಗ್ಗೆ ವಿವರವಾದ ಡಿಪಿಆರ್ ತಯಾರಿಸಲಾಗಿತ್ತು. ಯೋಜನೆಯ ವರದಿ ಪ್ರಕಾರ ಸುಮಾರು 32.8 ಕಿ.ಮೀ ಹೆದ್ದಾರಿಯನ್ನು ಅಭಿವೃದ್ಧಿ ಮಾಡಲಾಗುತ್ತದೆ. ರಸ್ತೆ ನಿರ್ಮಾಣಕ್ಕೆ 120 ಕೋಟಿ ರೂ., ಭೂ ಸ್ವಾಧೀನ ಎಲ್ಲಾ ಸೇರಿ ಒಟ್ಟು 156 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿತ್ತು. ಈ ಯೋಜನೆಗೆ 20 ಎಕರೆಯಷ್ಟು ಜಾಗವನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಮತ್ತು 12 ಕಿರು ಸೇತುವೆ ನಿರ್ಮಾಣ, 1.5 ಕಿ.ಮೀ. ಬೈಪಾಸ್ ರಸ್ತೆಯನ್ನು ತೆರಕಣಾಂಬಿಯಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಗುಂಡ್ಲುಪೇಟೆ ವೃತ್ತದಿಂದ 800 ಮೀಟರ್‌ವರೆಗೆ ನಾಲ್ಕು ಪಥಗಳ ರಸ್ತೆ ನಿರ್ಮಾಣ, ರಸ್ತೆ ಹಾದು ಹೋಗುವ ಗ್ರಾಮಗಳಲ್ಲಿ ಚರಂಡಿ, ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ತಡೆ-ಗೋಡೆಗಳನ್ನು ನಿರ್ಮಾಣ ಮಾಡುವುದು ವರದಿಯಲ್ಲಿತ್ತು. ಆದರೇ ಇದು ನನೆಗುದಿಗೆ ಬಿದ್ದಿದ್ದು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

ಜಿಲ್ಲಾ ಕೇಂದ್ರದಿಂದ ಸಿಮ್ಸ್ ಆಸ್ಪತ್ರೆಗೆ ಹೋಗುವವರೆಗೆ ರಸ್ತೆ ತೀರಾ ಹದಗೆಟ್ಟಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ರಸ್ತೆ ಅಲ್ಲಲ್ಲಿ ಗುಂಡಿಮಯವಾಗಿದ್ದು, ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಲೇ ಇದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆಯನ್ನು ವಿಸ್ತರಣೆ ಮಾಡಬೇಕು.

-ಪ್ರದೀಪ್ ಉತ್ತುವಳ್ಳಿ, ಆಟೋ ಚಾಲಕ, ಚಾಮರಾಜನಗರ