ಜಿಲ್ಲೆ

ಚಹಾ ಮಾರುವವಳು ಗ್ರಾಪಂ ಅಧ್ಯಕ್ಷೆ !

ಕಲಬುರಗಿ: ಚಹಾ ಮಾರುವ ಮಹಿಳೆಯೊಬ್ಬಳು ಭೀಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ವಾಡ್ ಚೀಟಿ ಎತ್ತುವ ಮೂಲಕ ಆಯ್ಕೆಯಾದರು.

ಗ್ರಾಪಂ ಎರಡನೇ ಅವಧಿಗಾಗಿ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷ ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ ಹಿಂದುಳಿದ ವರ್ಗ(ಅ)ಕ್ಕೆ ಮೀಸಲಾಗಿತ್ತು. 16 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಮಲಿಬಾಯಿ, ಲಕ್ಷ್ಮೀ ಪವಾರ್ ನಾಮಪತ್ರ ಸಲ್ಲಿಸಿದ್ದರು. ಗಮಲಿಬಾಯಿ 9 ವೋಟ್ ಪಡೆದು ಗೆದ್ದರೆ, ಲಕ್ಷ್ಮೀ 7 ಮತದೊಂದಿಗೆ ಸೋಲನುಭವಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರಿಂದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ್, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಪ್ರಮುಖರಾದ ಸುಭಾಷಗೌಡ ಪಸಾರ್, ಬಸವರಾಜ ಪೂಜಾರಿ, ನಿಂಗಪ್ಪ ಗೋಡೆಕರ್, ಜಗದೀಶ ಚವ್ಹಾಣ್, ಶರಣು ಡೋಣಗಾಂವ್, ಸಂತೋಷ ಚವ್ಹಾಣ್, ಬಾಲರಾಜ ಚವ್ಹಾಣ್ ಇತರರಿದ್ದರು.

ಭಜ್ಜಿ, ಟೀ ಮಾರುವ ಗಮಲಿಬಾಯಿ: ಭೀಮನಹಳ್ಳಿ ಗ್ರಾಪಂ ಅಧ್ಯಕ್ಷೆ ಗಮಲಿಬಾಯಿ ರಾಠೋಡ್ ಸೇಡಂ-ಯಾದಗಿರಿ ರಸ್ತೆಯ ಬಾರಿಗಿಡ ಕ್ರಾಸ್‌ನಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡಿದ್ದಾರೆ. ಗಮಲಿಬಾಯಿ ಪತಿ ನಿಧನ ಹೊಂದಿದ್ದು, ಮೂವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಹೋಟೆಲ್‌ನಲ್ಲಿ ಚಹಾ, ಭಜ್ಜಿ, ಸುಸಲಾ ಮಾರಿ ಜೀವನ ನಡೆಸುತ್ತಿದ್ದಾರೆ.