ಮೈಸೂರು: ರಾಜಕಾರಣವನ್ನು ನಿಯಂತ್ರಿಸುತ್ತಿದ್ದ ಚಳವಳಿ ಇಂದು ಧ್ವನಿ ಕಳೆದುಕೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕನ್ನಡ ಚಳವಳಿ ಹೋರಾಟಗಾರ ಮೈ.ನಾ.ಗೋಪಾಲಕೃಷ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಚಳವಳಿಗಳು ಸೊರಗಿವೆ. ಯುವಜನರಲ್ಲಿ ಅನ್ಯಾಯವನ್ನು ಪ್ರಶ್ನಿಸುವ ಉತ್ಸಾಹವೇ ಇಲ್ಲವಾಗಿದೆ. ಹೀಗಾದರೆ ಸರ್ಕಾರಕ್ಕೆ ಹೇಳುವವರು, ಕೇಳುವವರು ಇಲ್ಲವಾಗುತ್ತಾರೆ. ಜನಪರ ಕಾರ್ಯಕ್ರಮಗಳು ಕುಂಠಿತವಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜ್ಯದಲ್ಲಿ ಚಳವಳಿಗಳನ್ನು ಸಾಯಿಸಿದರು. ನಾಯಕತ್ವ ಕೊರತೆಗೆ ಕಾರಣರಾದರು. ರಾಜ್ಯದಲ್ಲಿ ರಾಜಕೀಯ, ಸಾಮಾಜಿಕ ನಾಯಕತ್ವಕ್ಕೆ ಚಳವಳಿಗಳ ಕೊಡುಗೆ ಅಪಾರ. ಹೆಗಡೆ ಅವಧಿಯಲ್ಲಿ ವಿದ್ಯಾರ್ಥಿ ಚಳವಳಿಗಳಿಗೆ ನಿಷೇಧ ಹೇರಿದರು. ರೈತ ಚಳವಳಿಯನ್ನು ದುರ್ಬಲಗೊಳಿಸಿದರು ಎಂದು ಆರೋಪಿಸಿದರು.
ಮೈ.ನಾ.ಗೋಪಾಲಕೃಷ್ಣ ಅವರಂತೆ ಅನೇಕರು ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಅವರ ನಿಸ್ವಾರ್ಥ ಹೋರಾಟದಿಂದ ಭಾಷಾಭಿಮಾನ ವೃದ್ಧಿಯಾಗಿತ್ತು. ನಾಡಿನಲ್ಲಿ ಜಾಗೃತಿ ಉಂಟಾಗಲು ಸಾಮಾಜಿಕ ಹೋರಾಟಗಾರರ ಅಗತ್ಯ ಹೆಚ್ಚಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಸಮಾಜ ಸೇವಕ ರಘುರಾಮ್ ವಾಜಪೇಯಿ ಇದ್ದರು.