ನಾಗಮಂಗಲ: ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಲು ಹಾಗೂ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ್ದ ಅನುದಾನಗಳನ್ನು ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ಮೂಲಕ ತಡೆಹಿಡಿಸುವ ಮೂಲಕ ಚಲುವರಾಯಸ್ವಾಮಿ ಆ್ಯಂಡ್ ಟೀಂ ಜಿಲ್ಲೆಯ ಜನರಿಗೆ ದ್ರೋಹವೆಸಗಿದೆ ಎಂದು ಶಾಸಕ ಸುರೇಶ್‌ಗೌಡ ಆರೋಪಿಸಿದರು.
ಪಟ್ಟಣದ ಎಸ್‌ಎಲ್‌ಎನ್ ಸಮುದಾಯಭವನದ ಆವರಣದಲ್ಲಿ ತಾಲೂಕು ಜೆಡಿಎಸ್ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಪಕ್ಷದ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಜೆಟ್ ಮಂಡಿಸಿದಾಗ ಕಾಂಗ್ರೆಸ್, ಬಿಜೆಪಿಯವರು ಹಾಸನ ಮತ್ತು ಮಂಡ್ಯ ಜಿಲ್ಲೆಯ ಬಜೆಟ್ ಎಂದು ಟೀಕಿಸಿದ್ದರು. ಆದರೆ, ಇಂದು ಅವರೇ ಮಂಡ್ಯ ಜಿಲ್ಲೆಗೆ ಎಚ್‌ಡಿಕೆ ಕೊಡುಗೆ ಏನು ಇಲ್ಲ ಎಂದು ಹೇಳುತ್ತಿದ್ದಾರೆ. ಜನರು ಮೂರ್ಖರಲ್ಲ. ಪ್ರತಿಯೊಬ್ಬ ಮುಖಂಡರ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಂಡು ಯಾರು ಏನೆಲ್ಲಾ ಮಾತನಾಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಎಚ್‌ಡಿಕೆ ಸಿಎಂ ಆಗಿದ್ದಾಗ ಜಿಲ್ಲೆಗೆ ನೀಡಿದ್ದ ಅನುದಾನ ಎಷ್ಟು ಎಂಬುದು ದಾಖಲೆಯಲ್ಲಿದೆ. ವಿರೋಧಿಗಳು ಆ ದಾಖಲೆಗಳನ್ನು ಒಮ್ಮೆ ತರಿಸಿಕೊಂಡು ನೋಡಲಿ. ಆದರೆ, ಎಚ್‌ಡಿಕೆ ನೀಡಿದ್ದ ಅನುದಾನವನ್ನು ಚಲುವರಾಯಸ್ವಾಮಿ ಅವರು ಯಡಿಯೂರಪ್ಪನ ಮಗನ ಹತ್ತಿರ ಕುಳಿತುಕೊಂಡು ಬೇರೆ ಜಿಲ್ಲೆಗೆ ವರ್ಗಾಯಿಸಿದ್ದು ಯಾರಿಗೂ ತಿಳಿದಿಲ್ಲ ಎಂದುಕೊಂಡಿದ್ದಾರೆ. ನಮ್ಮ ಜಿಲ್ಲೆಗೆ ಯಾರಾದರೂ ದ್ರೋಹ ಅಥವಾ ಮೋಸ ಮಾಡಿದ್ದರೆ ಅದು ಚಲುವರಾಯಸ್ವಾಮಿ ಮತ್ತು ಅವರ ಟೀಂ ಮಾತ್ರ ಎಂದು ಕಿಡಿಕಾರಿದರು.
ಬೆಂಗಳೂರು ಮತದಾರರೇ ನಿರ್ಣಾಯಕ: ನಾಗಮಂಗಲ ರಾಜಕಾರಣದಲ್ಲಿ ಯಾವುದೇ ವ್ಯಕ್ತಿ ಗೆಲುವು-ಸೋಲಿನಲ್ಲಿ ಬೆಂಗಳೂರಿನ ಮತದಾರರ ಪಾತ್ರ ಪ್ರಮುಖ. ಗೆಲುವಿಗೆ ಬೆಂಗಳೂರಿನ ಮತದಾರರೇ ನಿರ್ಣಾಯಕರಾಗಿದ್ದು ಅವರನ್ನು ಪ್ರತಿಯೊಬ್ಬರು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡಬೇಕಿದೆ. ಮಾರ್ಚ್ 5 ರಂದು ಬೆಂಗಳೂರು ನಿವಾಸಿಗಳ ಬೃಹತ್ ಸಭೆ ಮಾಡಲಾಗುತ್ತಿದ್ದು ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿಗರ ವಿಶ್ವಾಸ ಸಿಕ್ಕರೆ ನಮ್ಮ ಗೆಲುವು ನಿಶ್ಚಿತ ಎಂದರು.
ಅಕ್ರಮ ಸಾಬೀತುಪಡಿಸಿದರೆ ರಾಜೀನಾಮೆ: ಬಗರ್‌ಹುಕುಂ ಜಮೀನು ಮಂಜೂರು ಮಾಡುವಲ್ಲಿ ಶಾಸಕರು ಹಣ ಮಾಡುತ್ತಿದ್ದಾರೆ, ಅವರ ಹೆಸರಿಗೂ ಬೋಗಸ್ ಮಾಡಿಕೊಂಡು ಜಮೀನು ಮಂಜೂರು ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ವಿರೋಧಿಗಳು ಮಾಡುತ್ತಿದ್ದಾರೆ. ಆದರೆ, ನನ್ನ ಪಿತ್ರಾರ್ಜಿತ ಆಸ್ತಿಯನ್ನು ಹೊರತುಪಡಿಸಿ ಒಂದೇ ಒಂದು ಗುಂಟೆ ಜಮೀನು ಮಂಜೂರು ಮಾಡಿಕೊಂಡಿರುವುದನ್ನು ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡುವ ಜತೆಗೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ದ್ವೇಷ ರಾಜಕಾರಣ ಮಾಡಲ್ಲ: ನಮ್ಮ ರಾಜಕೀಯ ತೆವಲಿಗೆ ಕಾರ್ಯಕರ್ತರ ನಡುವೆ ದ್ವೇಷ ಬೆಳೆಸಿ ಪೊಲೀಸ್ ಕೇಸ್ ಹಾಕಿಸಿ ಕಾರ್ಯಕರ್ತರ ಜೀವನ ಹಾಳು ಮಾಡುವಂತಹ ದ್ವೇಷದ ರಾಜಕಾರಣವನ್ನು ನಾನೆಂದು ಮಾಡುವವನಲ್ಲ ಎಂದರು.
ಇದೇ ಸಂದರ್ಭ ಜೆಡಿಎಸ್ ಪಕ್ಷದ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ನೇಮಕಾತಿ ಪತ್ರವನ್ನು ಶಾಸಕ ಸುರೇಶ್‌ಗೌಡ ವಿತರಿಸಿದರು. ಮನ್‌ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು, ಕೋಟಿರವಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ, ರಾಜಣ್ಣ, ಕಂಚಿನಕೋಟೆ ಮೂರ್ತಿ, ಯದುರಾಜು, ಚಿಕ್ಕತಾಯಮ್ಮ, ನಾಗೇಶ್, ಕೃಷ್ಣೇಗೌಡ ಇದ್ದರು.