ಜಿಲ್ಲೆ

ಚಲಿಸುತ್ತಿದ್ದ ಬೈಕ್ ಅಡ್ಡಗಟ್ಟಿ ದರೋಡೆ

Hassan - Ramesh H R

ಹಾಸನ: ಹಿಂಬದಿಯಿಂದ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದರೋಡೆಕೋರರು ಮುಂದೆ ಸಾಗುತ್ತಿದ್ದ ಬೈಕ್ ಅಡ್ಡಗಟ್ಟಿ ಸವಾರನಿಗೆ ಚಾಕುವಿನಿಂದ ಹಲ್ಲೆ ಮಾಡಿ, 10 ಸಾವಿರ ಹಣ ಕಸಿದು ಪರಾರಿಯಾಗಿರುವ ಘಟನೆ ಕಟ್ಟಾಯ ಹೋಬಳಿಯ ಅಣ್ಣಿಗನಹಳ್ಳಿ- ಶಂಕರನಹಳ್ಳದ ಬಳಿ ಸೋಮವಾರ ರಾತ್ರಿ ನಡೆದಿದೆ.

ಹಾಸನ ತಾಲೂಕು, ಕಟ್ಟಾಯ ಹೋಬಳಿಯ ದೋರನಹಳ್ಳಿಯ ರಾಜು ಅವರು ಸೋಮವಾರ ಆಯಿಲ್ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಹಾಸನದಿಂದ ತಮ್ಮ ಗ್ರಾಮದತ್ತ ಹೊರಟಿದ್ದಾರೆ. ರಾತ್ರಿ 9.30ರ ಸಮಯದಲ್ಲಿ ಅಣ್ಣಿಗನಹಳ್ಳಿ- ಶಂಕರನಹಳ್ಳದ ಬಳಿ ಹೋಗುವಾಗ ಹಿಂದಿನಿಂದ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದರೋಡೆಕೋರರು ರಾಜು ಚಲಿಸುತ್ತಿದ್ದ ಬೈಕ್ ಅಡ್ಡಗಟ್ಟಿದ್ದಾರೆ. ಬಳಿಕ ಬೈಕ್ ಕೀ ಕಿತ್ತುಕೊಳ್ಳಲು ಮುಂದಾದಾಗ ರಾಜು ತಡೆಯುವ ಪ್ರಯತ್ನ ಮಾಡಿದ್ದಾರೆ. ಆಗ ಚಾಕುವಿನಿಂದ ಹಲ್ಲೆ ಮಾಡಿದ ದರೋಡೆಕೋರರು ಆತನ ಪ್ಯಾಂಟ್ ಜೇಬಿನಲ್ಲಿದ್ದ 10 ಸಾವಿರ ಹಣ ಕಸಿದುಕೊಂಡಿದ್ದಾರೆ. ಈ ವೇಳೆ ಹಾಸನ ಕಡೆಯಿಂದ ವಾಹನವೊಂದರ ಬೆಳಕು ಕಂಡಾಗ ತಕ್ಷಣ ಅಲ್ಲಿಂದ ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ.

ಹಲ್ಲೆಯಿಂದ ರಾಜು ಕೈ ಹಾಗೂ ಕಾಲಿಗೆ ಗಾಯವಾಗಿದ್ದು ಕೂಡಲೇ ಅವರು ಹಾಸನ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಗೊರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.