ಜಿಲ್ಲೆ

ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲೇ ಹೃದಯಾಘಾತವಾಗಿ ಚಾಲಕ ಸಾವು

ನೆಲಮಂಗಲ: ನಗರದ ಬಿನ್ನಮಂಗಲ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲೇ ಹೃದಯಾಘಾತವಾಗಿ ಚಾಲಕ ಮೃತಪಟ್ಟಿದ್ದಾರೆ.

ಹಾಸನ ತಾಲೂಕಿನ ಗಾವೇನಹಳ್ಳಿ ನಿವಾಸಿ ಕಿರಣ್‌ಕುಮಾರ್ (40) ಮೃತ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋ 40ರಲ್ಲಿ 6 ವರ್ಷದಿಂದ ಕಿರಣ್ ಚಾಲಕರಾಗಿದ್ದರು. ಬುಧವಾರ ಬೆಳಗ್ಗೆ 11.30ರ ಸುಮಾರಿನಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ನೆಲಮಂಗಲ ಬಸ್ ನಿಲ್ದಾಣದಿಂದ ದಾಸನಪುರ ಡಿಪೋಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಬಿನ್ನಮಂಗಲ ಬಳಿ ಹೃದಯಾಘಾತವಾಗಿದೆ. ತಕ್ಷಣ ನಿರ್ವಾಹಕ ಬಸ್ ನಿಲ್ಲಿಸಿದ್ದು, ಸ್ಥಳೀಯರ ಸಹಕಾರದಿಂದ ಸಮೀಪದ ವಿಪಿ ಮ್ಯಾಗ್ನಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪಿದ ಬಾರಿ ಅನಾಹುತ: ಕಿರಣ್‌ಕುಮಾರ್‌ಗೆ ಹೃದಯಾಘಾತವಾದ ಕೂಡಲೇ ನಿಯಂತ್ರಣ ತಪ್ಪಿದ ಬಸ್, ಚಲಿಸುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿಯಾಗಿದೆ. ತಕ್ಷಣ ಸಮೀಪದಲ್ಲಿದ್ದ

ನಿರ್ವಾಹಕ ಓಬಳೇಶ್ ಬಸ್ ನಿಯಂತ್ರಿಸಿದ್ದು, ಭಾರಿ ಅನಾಹುತ ತಪ್ಪಿದೆ.

3 ದಿನದಿಂದ ನಿರಂತರ ಕೆಲಸ: ಕಿರಣ್‌ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿಪೋ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಒತ್ತಡ ಹಾಕಿ 3 ದಿನದಿಂದ ನಿರಂತರ ಕೆಲಸ ಮಾಡಿಸಿದ್ದಾರೆ, ಹೀಗಾಗಿ ಹೃದಯಾಘಾತ ಸಂಭವಿಸಿದೆ ಎಂದು ಮೃತನ ಕುಟುಂಬಸ್ಥರು ಹಾಗೂ ಸಹದ್ಯೋಗಿಗಳು ದಾಸನಪುರ ಡಿಪೋ ವ್ಯವಸ್ಥಾಪಕರ ಮೇಲೆ ಆರೋಪ ಮಾಡಿದ್ದಾರೆ.

ಕ್ಯಾಂಟರ್ ಡಿಕ್ಕಿಯಾಗಿ ನಿವೃತ್ತ ಎಎಸೈ ಸಾವು

ಆನೇಕಲ್: ಅತ್ತಿಬೆಲೆ ಸಮೀಪ ಬುಧವಾರ ಕ್ಯಾಂಟರ್ ಡಿಕ್ಕಿಯಾಗಿ ನಿವೃತ್ತ ಎಎಸ್‌ಐ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಾಡುಗೋಡಿಯ ನಿವಾಸಿ, ನಿವೃತ್ತ ಎಎಸ್‌ಐ ಪ್ರಕಾಶ್(61) ಮೃತ. ಟಿವಿಎಸ್ ಕ್ರಾಸ್ ಮಾರ್ಗವಾಗಿ ತಮಿಳುನಾಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಧರ್ಮಪುರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಕ್ಯಾಂಟರ್ ಡಿಕ್ಕಿಯಾಗಿದ್ದು, ಪ್ರಕಾಶ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ಎಸಗಿ ಕ್ಯಾಂಟರ್ ಸಮೇತ ಪರಾರಿಯಾಗಲು ಯತ್ನಿಸಿದ ಚಾಲಕ ದಿನೇಶ್ ಎಂಬಾತನನ್ನು ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಅತ್ತಿಬೆಲೆ ಸಮೀಪದ ಆಕ್ಸ್‌ರ್ಡ್ ಆಸ್ಪತ್ರೆಗೆ ರವಾನಿಸಿದ್ದು, ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕರಾಯಪ್ಪನಹಳ್ಳಿ ಕೆರೆಯಲ್ಲಿ ಈಜಲು ಹೋದ ಪದವಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಬುಧವಾರ ಮೃತಪಟ್ಟಿದ್ದಾನೆ. ಲಘುಮೇನಹಳ್ಳಿ ನಿವಾಸಿ ಶ್ರೀನಿವಾಸ್ (20) ಮೃತ. ಈತ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಶೋಧ ಕಾರ್ಯದಲ್ಲಿ ತೊಡಗಿದ್ದು, ಸಂಜೆಯಾದ್ದರಿಂದ ಕಾರ್ಯಾಚರಣೆ ನಿಂತಿದೆ.