ಜಿಲ್ಲೆ

ಚಲಿಸಲ್ಲ ಅರಮನೆಗಳ ದರ್ಶನದ ಗಾಲಿ

ಮಂಜುನಾಥ ಟಿ.ಭೋವಿ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ಬರುವ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ‘ಪ್ಯಾಲೇಸ್ ಆನ್ ವ್ಹೀಲ್’ (ಗಾಲಿಯ ಮೇಲೆ ಅರಮನೆಗಳ ದರ್ಶನ) ಕಾರ್ಯಕ್ರಮವನ್ನು ಈ ಸಲ ಕೈಬಿಡಲಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿರುವ ಪ್ರಮುಖ ಪಾರಂಪರಿಕ ಕಟ್ಟಡಗಳ ಮತ್ತು ಅರಮನೆಗಳ ಅಂದವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪ್ರವಾಸಿಗರಿಗೆ ಸುಲಭವಾಗಿ ಕಲ್ಪಿಸಿಕೊಡುವ ಕಾರ್ಯಕ್ರಮ ಇದಾಗಿದೆ. ಆದರೆ, ಈ ಬಾರಿ ಇದನ್ನು ಆಯೋಜಿಸುತ್ತಿಲ್ಲ. ಸಂಚಾರ ಗಾಡಿಯ ಗಾಲಿಗೆ ಅಡಕತ್ತರಿ ಸಿಲುಕಿಕೊಂಡು ಮುಂದಕ್ಕೆ ಸಾಗದಂತಾಗಿದ್ದು, ಇದರಿಂದಾಗಿ ಮೈಸೂರಿನ ಐತಿಹಾಸಿಕ ಕುರುಹು ತೋರಿಸುವ ಅವಕಾಶವೂ ಕೈತಪ್ಪಿದಂತಾಗಿದೆ.

ಪ್ರವಾಸೋದ್ಯಮ ಇಲಾಖೆ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಇದನ್ನು ಪರಿಚಯ ಮಾಡುತ್ತಿತ್ತು. ಇದರಿಂದ ಇಲಾಖೆಗೆ ಆದಾಯವೂ ಬರುತ್ತಿತ್ತು. ಕಡಿಮೆ ಖರ್ಚಿನಲ್ಲಿ ಯಾವುದೇ ಜಂಜಾಟವಿಲ್ಲದೆ ಐತಿಹಾಸಿಕ ಸ್ಥಳವನ್ನು ವೀಕ್ಷಣೆಗೆ ಅನುವು ಮಾಡಿಕೊಂಡಿದ್ದರಿಂದ ಪ್ರವಾಸಿಗರು ದಿಲ್‌ಖುಷ್ ಆಗಿದ್ದರು. ಆದರೀಗ ಇದು ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರಿಗೆ ನಿರಾಶೆಯಾಗಿದೆ.

ಕಾರ್ಯಕ್ರಮಗಳಿಗೆ ಮರುಚಾಲನೆ ಇಲ್ಲ:
ಕರೊನಾ ಸಂಕ್ರಮಣವು ಅನೇಕ ಕ್ಷೇತ್ರಗಳ ವ್ಯವಸ್ಥೆಯನ್ನು ಏರಿಳಿತಗೊಳಿಸಿ ವ್ಯತ್ಯಾಸ ಮಾಡಿಬಿಟ್ಟಿದೆ. ಇದಕ್ಕೆ ಮೈಸೂರು ದಸರಾ ಕೂಡ ಅಪವಾದವಲ್ಲ. ಕೋವಿಡ್‌ಗೂ ಪೂರ್ವಕಾಲದಲ್ಲಿ ದಸರಾಕ್ಕೆ ಪೂರಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿತ್ತು. ಅಲ್ಲದೆ, ಇವುಗಳಿಗೆ ಹೊಸ ವಿನ್ಯಾಸ, ರೂಪ ನೀಡಿ ಇನ್ನಷ್ಟು ಆಕರ್ಷಣೀಯಗೊಳಿಸಿ ದಸರಾ ವೈಭವವನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಕರೊನಾ ಕಾರಣಕ್ಕೆ ಕಳೆದ ಎರಡು ವರ್ಷ ದಸರಾವನ್ನು ಸರಳವಾಗಿ ಆಚರಣೆ ಮಾಡ ಲಾ ಯಿತು. ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ ಮತ್ತು ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಸಿ ದಸರೆಗೆ ತೆರೆ ಎಳೆಯಲಾಗಿತ್ತು. ಆದರೀಗ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಆದರೆ, ಕರೊನಾ ಮಾಡಿಹೋಗಿರುವ ಅವಾಂತರ ಇನ್ನೂ ಮರೆಯಾಗಿಲ್ಲ.
2 ವರ್ಷ ಸ್ಥಗಿತಗೊಂಡಿದ್ದ ದಸರಾ ಕೆಲ ಕಾರ್ಯಕ್ರಮಗಳಿಗೆ ಮರು ಚಾಲನೆ ನೀಡುವ ಕಾಯಕವೂ ಆಗುತ್ತಿಲ್ಲ. ತುಂಡಾ ಗಿದ್ದ ದಸರಾ ಸರಪಳಿಯನ್ನು ಜೋಡಣೆ ಮಾಡುವ ಕೆಲಸವೂ ಮಾಡುತ್ತಿಲ್ಲ. ಈ ರೀತಿ ವಿಭಿನ್ನ ಕಾರ್ಯಕ್ರಮಗಳ ಕುರಿತು ಪ್ರಸ್ತುತ ಅಧಿ ಕಾರಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವೇ ‘ಪ್ಯಾಲೇಸ್ ಆನ್ ವ್ಹೀಲ್’ ಕಾರ್ಯಕ್ರಮ.

ಒಂದು ದಿನ ಪ್ರವಾಸ:
ಇದು ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಸಹಭಾಗಿತ್ವದಲ್ಲಿ ಕಾರ್ಯರೂಪಕ್ಕೆ ಬಂದಿತ್ತು. ಪ್ರವಾಸಿಗರ ಓಡಾಟಕ್ಕೆ 36 ಸೀಟ್‌ಗಳ ವೋಲ್ವೊ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಬೆಳಗ್ಗೆ 10ರಿಂದ ಪ್ರವಾಸ ಆರಂಭವಾಗಿ ಸಂಜೆ 6.30ಕ್ಕೆ ಮುಕ್ತಾಯಗೊಳ್ಳುತ್ತಿತ್ತು.

ನಗರ ಇತಿಹಾಸ ಪರಿಚಯ:
ಅರಮನೆ, ಜಗನ್ಮೋಹನ ಅರಮನೆ, ಲಲಿತಮಹಲ್ ಹೋಟೆಲ್, ವಸಂತಮಹಲ್, ಕಾರಂಜಿ ಅರಮನೆ, ಚೆಲುವರಾಜಮ್ಮಣ್ಣಿ ಅರ ಮನೆ, ಜಯಲಕ್ಷ್ಮೀವಿಲಾಸ ಅರಮನೆಯನ್ನು ಪ್ರವಾಸಿಗರು ನೇರವಾಗಿ ಮತ್ತು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿತ್ತು. ಇದ ರೊಂ ದಿಗೆ ನಗರದ ಪಾರಂಪರಿಕ ಕಟ್ಟಡಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ನೋಡಬಹುದಾಗಿತ್ತು. ಈ ಮೂಲಕ ನಗರದ ಪಾರಂಪರಿಕ ಕಟ್ಟಡಗಳನ್ನು ಪರಿಚಯಿಸಲಾಗುತ್ತಿತ್ತು.

ದರ ಬಲು ಕಡಿಮೆ:
ಸಂಚಾರ ಸಹಿತ ಟೂರ್ ಪ್ಯಾಕೇಜಿನ ದರ ಕೂಡ ಹೆಚ್ಚಿರಲಿಲ್ಲ. ಕೇವಲ 999 ರೂ. ನಿಗದಿ ಮಾಡಲಾಗಿತ್ತು. ಪ್ರವಾಸಕ್ಕೆ ಹೊರಡುವ ಹವಾನಿಯಂತ್ರಿತ ಬಸ್‌ನಲ್ಲಿ ಉಚಿತ ವೈಫೈ ಸೌಲಭ್ಯ, ನುರಿತ ಪ್ರವಾಸಿ ಗೈಡ್, ಊಟ, ಉಪಾಹಾರ ಇದರಲ್ಲಿ ಒಳಗೊಂಡಿತ್ತು. ಆನ್‌ಲೈನ್ ಬುಕ್ಕಿಂಗ್ ಕೂಡ ಮಾಡಬಹುದಾಗಿತ್ತು. ಪ್ರವಾಸಿ ಸ್ನೇಹಿತ ಕಾರ್ಯಕ್ರಮದಿಂದ ಇದು ಬಹಳಷ್ಟು ಜನರಿಗೆ ಇಷ್ಟವಾಗಿತ್ತು. ಆದ್ದರಿಂದ ಈ ಸಲವೂ ‘ಪ್ಯಾಲೇಸ್ ಆನ್ ವ್ಹೀಲ್’ಗೆ ಮರು ಚಾಲನೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಉತ್ತಮ ಸ್ಪಂದನೆ:
ಪ್ರತಿ ದಸರಾದಲ್ಲೂ ಖಾಸಗಿ ಟೂರ್ ಪ್ಯಾಕೇಜ್‌ಗೆ ಹೋಲಿಕೆ ಮಾಡಿದರೆ ಇದಕ್ಕೆ ಬೇಡಿಕೆ ಅಧಿಕ. ಬಹಳ ಕಡಿಮೆ ದರದಲ್ಲಿ ಹೆಚ್ಚು ಪ್ರವಾಸಿ ತಾಣಗಳ ವೀಕ್ಷಣೆಗೆ ನೇರವಾಗಿ ಅವಕಾಶ, ಟಿಕೆಟ್ ಖರೀದಿ, ಅದಕ್ಕಾಗಿ ಸರದಿ ಸಾಲು, ಬಾಡಿಗೆ ವಾಹನ ಮಾಡಿಕೊಳ್ಳುವ ಉಸಾ ಬರಿ ಇಲ್ಲಿಲ್ಲ. ಈ ಕಾರಣಕ್ಕೆ ಕಳೆದ ಸಲ ಈ ಪ್ಯಾಕೇಜ್‌ಗೆ ಪ್ರವಾಸಿಗರಿಂದ ಉತ್ತಮ ಬೆಂಬಲ ಸಿಕ್ಕಿತ್ತು.

ಅನ್ಯ ರಾಜ್ಯದವರೇ ಹೆಚ್ಚು:
ಈ ಕಾರ್ಯಕ್ರಮದಿಂದ ವಿದೇಶ ಹಾಗೂ ಅನ್ಯ ರಾಜ್ಯದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಿತ್ತು. ಅದರಲ್ಲೂ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸಹಿತ ಅನ್ಯ ರಾಜ್ಯದ ಪ್ರವಾಸಿಗರು ಈ ಪ್ಯಾಕೇಜ್‌ಗಾಗಿ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ‘ಪ್ಯಾಲೇಸ್ ಆನ್ ವ್ಹೀಲ್’ ಅನ್ನು ಪ್ರತಿ ದಸರಾದಲ್ಲೂ ಆಯೋಜಿಸುವ ಯೋಜನೆಯಾಗಿ ರೂಪಗೊಂಡಿತ್ತು. ಆದರೆ, ಈ ಸಲ ದರ್ಶನ ಗಾಲಿ ತಿರುಗುತ್ತಿಲ್ಲ..!

ಖಾಸಗಿ ಸಂಸ್ಥೆಗಳಿಂದ ಪ್ರವಾಸಿಗರ ಸುಲಿಗೆ
‘ಪ್ಯಾಲೇಸ್ ಆನ್ ವ್ಹೀಲ್’ ಸ್ಥಗಿತಗೊಂಡಿರುವುದರಿಂದ ಖಾಸಗಿ ಪ್ರವಾಸಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲಿವೆ. ಮೈಸೂರಿಗೆ ಬರುವ ಪ್ರವಾಸಿಗರಿಂದ ಅಧಿಕ ಹಣ ಸುಲಿಗೆ ಮಾಡಲು ಟೂರ್ ಪ್ಯಾಕೇಜ್ ನಿಗದಿ ಮಾಡಿವೆ. ಜತೆಗೆ, ಪ್ರವಾಸಿ ತಾಣಗಳ ಕುರಿತು ತಪ್ಪು ಮಾಹಿತಿ ನೀಡಿ ಇವರನ್ನು ದಾರಿ ತಪ್ಪಿಸುತ್ತಿವೆ. ಮಾಲ್‌ಗಳು, ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಇವರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪ್ರವಾಸೋದ್ಯಮ ಇಲಾಖೆಯಿಂದ ‘ಪ್ಯಾಲೇಸ್ ಆನ್ ವ್ಹೀಲ್’ ಪ್ರಾರಂಭಿಸಬೇಕಾಗಿದೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ‘ಗಾಲಿಯ ಮೇಲೆ ಅರಮನೆಗಳ ದರ್ಶನ’ ಕಾರ್ಯಕ್ರಮ ಮಾಡುವ ಪ್ರಸ್ತಾವನೆ ಇಲ್ಲ. ಈ ಹಿಂದೆ ಈ ಕಾರ್ಯಕ್ರಮ ಮಾಡಲಾಗಿತ್ತು. ಈ ಸಲ ಮಾಡುತ್ತಿಲ್ಲ.ಎಚ್.ಬಿ. ರಾಘವೇಂದ್ರ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ