ಗುಂಡ್ಲುಪೇಟೆ: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಿತಿಮೀರಿದ ಚರ್ಮಗಂಟು ರೋಗದಿಂದ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಾಲೀಕರು ಹೈರಾಣಾಗುತ್ತಿದ್ದಾರೆ.
ತಾಲೂಕಿನಲ್ಲಿ ಹಸು, ಎತ್ತು, ಎಮ್ಮೆ, ಮೇಕೆ ಸೇರಿದಂತೆ ಸುಮಾರು 70 ಸಾವಿರ ಜಾನುವಾರುಗಳಿವೆ. ಕಳೆದ ಎರಡು ತಿಂಗಳಿನಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹಾಗೂ ಚರ್ಮಗಂಟು ರೋಗ ಬಾಧಿಸುತ್ತಿದೆ. ಈ ರೋಗಕ್ಕೆ ಸಮರ್ಪಕ ಚಿಕಿತ್ಸೆ ದೊರಕದ ಪರಿಣಾಮ ಈಗಾಗಲೇ ಸಾವಿರಾರು ರಾಸುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ.
ಎಲ್ಲ ಗ್ರಾಮಗಳಲ್ಲಿಯೂ ಪಶುವೈದ್ಯ ಆಸ್ಪತ್ರೆ ಇಲ್ಲದ ಪರಿಣಾಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವುದು ಮಾಲೀಕರಿಗೆ ಭಾರಿ ಸವಾಲಾಗುತ್ತಿದೆ. ಡೇರಿಗಳಿಗೆ ಹಾಲು ಸರಬರಾಜು ಮಾಡುವ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯವಿದ್ದರೂ ಎಲ್ಲ ಔಷಧಗಳನ್ನು ಮೆಡಿಕಲ್ ಷಾಪ್‌ಗಳಿಂದ ಖರೀದಿಸಿ ತಂದರೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. ಇದರಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ವೈದ್ಯರು ಹೇಳಿದ ಮೆಡಿಕಲ್ ಷಾಪ್‌ಗಳಲ್ಲಿ ದುಬಾರಿ ಬೆಲೆಕೊಟ್ಟು ಔಷಧ ಖರೀದಿಸಿ ತರಬೇಕಾಗಿದೆ. ಅಲ್ಲದೆ ಯಾವುದೇ ಊರಿಗೆ ಕರೆದರೂ ಪೆಟ್ರೋಲ್ ಚಾರ್ಜ್ ಎಂದು 150 ರೂ. ಕೊಟ್ಟರೆ ಮಾತ್ರ ಬರುವುದಾಗಿ ಮೊದಲೇ ತಿಳಿಸುತ್ತಿದ್ದಾರೆ. ಇದರಿಂದ ಚಿಕಿತ್ಸೆ ಕೊಡಿಸುವುದು ದುಬಾರಿಯಾಗಿ ಪರಿಣಮಿಸುತ್ತಿದೆ.
ಹಲವು ಜಾನುವಾರುಗಳ ಮೈಮೇಲಿನ ಗಂಟುಗಳು ದೊಡ್ಡದಾಗಿ, ಒಡೆದು ಕೀವು ಸೋರುತ್ತಿವೆ. ಇದರಿಂದ ಮೂಕ ಜೀವಿಗಳು ಹಲವು ದಿನಗಳಿಂದ ನರಳುತ್ತಿವೆ. ಪ್ರತಿ ಭೇಟಿಗೂ 800-900 ರೂ. ಔಷಧ ಹಾಗೂ ವೈದ್ಯರಿಗೆ 150 ರೂ. ಕೊಟ್ಟರೂ ಜಾನುವಾರುಗಳ ಆರೋಗ್ಯ ಸುಧಾರಿಸುತ್ತಿಲ್ಲ. ಇವುಗಳ ಕಷ್ಟವನ್ನು ನೋಡಲಾಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.