ಜಿಲ್ಲೆ

ಚರ್ಚೆಯಿಂದ ಪಲಾಯನಕ್ಕೆ ಸಂಸದರಿಂದ ವಾಮಮಾರ್ಗ

ಬೀದರ್: ಬಹಿರಂಗ ಚರ್ಚೆ ಯಿಂದ ಪಲಾನಯಕ್ಕೆ ಸಂಸದ ಭಗವಂತ ಖೂಬಾ ವಾಮಮಾರ್ಗ ಅನುಸರಿಸಿದ್ದಾರೆ ಎಂದು ಭಾಲ್ಕಿ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಖೂಬಾ ಅವರಿಗೆ ಮತ್ತೊಂದು ಪತ್ರ ಬರೆದಿರುವ ಖಂಡ್ರೆ, ಬಹಿರಂಗ ಚರ್ಚೆಯ ನಿಮ್ಮ ಸವಾಲು ಸ್ವೀಕರಿಸಿ ಗಣೇಶ ಮೈದಾನದಲ್ಲಿ ಬನ್ನಿ ಎಂದು ಆಹ್ವಾನಿಸಿದ್ದೇನೆ. ನೀವು ಚರ್ಚೆಗೆ ರಂಗಮಂದಿರವೇ ಏಕೆ ಬೇಕು ಎನ್ನುತ್ತಿರುವಿರಿ? ಗಣೇಶ ಮೈದಾನ ಏಕಾಗಬಾರದು? ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಈಗ ಬಹಿರಂಗ ಚರ್ಚೆ ಯಿಂದ ಪಲಾಯನ ಮಾಡಲು ಕುಂಟು ನೆಪ ತೆಗೆದಿರುವಿರಿ. ಪಲಾಯನ ಮಾಡುತ್ತಿರುವುದು ನಾನಲ್ಲ, ನೀವು. ಬಹಿರಂಗ ಚರ್ಚೆಗೆ ನಿಮ್ಮ ರಾಜ್ಯಾಧ್ಯಕ್ಷ ನಳಿನನ ಕುಮಾರ್ ಕಟೀಲ್ ಅವರಿಗೆ ಪಂಥಾಹ್ವಾನ ನೀಡಿದ್ದೇ ನಾನು. ನಾನು ಪಲಾಯನ ಮಾಡಲು ಹೇಗೆ ಸಾಧ್ಯ? ಈಗಲೂ ಬಹಿರಂಗ ಚರ್ಚೆಗೆ ಸಿದ್ಧನಿರುವೆ. ವಾಮಮಾರ್ಗ ಅನುಸರಿಸುತ್ತಿದ್ದವರು ನೀವು ಎಂದು ಛೇಡಿಸಿದ್ದಾರೆ.

ಜನರನ್ನು ಸೇರಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ದಾರಿ ತಪ್ಪುತ್ತದೆ ಎಂದು ನೀವು ಉಲ್ಲೇಖಿಸಿದ್ದೀರಿ. ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ ಎಂದೂ ನಿಮ್ಮ ಪತ್ರದಲ್ಲಿ ಹೇಳಿರುವಿರಿ . ನಿಮ್ಮ ಪತ್ರ ಬಂದ ತರುವಾಯ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಜಿಲ್ಲಾಡಳಿತ, ಪೊಲೀಸರ ಮೇಲೆ ನೀವು ಎಷ್ಟು ಪ್ರಭಾವವನ್ನು ಬೀರುತ್ತಿದ್ದೀರಿ ಎಂಬುದೂ ಇದರಿಂದ ವೇದ್ಯವಾಗುತ್ತದೆ. ಬಹಿರಂಗ ಚರ್ಚೆ ತಪ್ಪಿಸಲು ಇದು ನಿಮ್ಮ ಪೂರ್ವನಿಯೋಜಿತ ಸಂಚು ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ.

ಗಣೇಶ ಮೈದಾನ ವಿಶಾಲವಿರುವ ಕಾರಣ ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಚರ್ಚೆ ಮಾಡುವುದು ಸೂಕ್ತ ಎಂದಿರುವೆ. ಆದರೆ ನೃತ್ಯ ಮಾಡಲು ಬರದಾಕೆ ನೆಲವೇ ಡೊಂಕು ಎಂದಳು ಎಂಬಂತಾಗಿದೆ ನಿಮ್ಮ ಸ್ಥಿತಿ. ನೀವು ವಿವೇಕಯುತವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿ. ನಿಮಗೆ ಮತ ನೀಡಿ ಗೆಲ್ಲಿಸಿದ ಜನರ ಕತ್ತು ಹಿಸುಕುವ ಕೆಲಸ ಮಾಡಬೇಡಿ. ಈಗಲೂ ಸಮಯ ಮೀರಿಲ್ಲ. ಬಹಿರಂಗ ಚರ್ಚೆಗೆ ನಾನು ಸಿದ್ಧ. ರಣ ಹೇಡಿಯಂತೆ ಹೋಗಬೇಡಿ ಎಂದು ಚಚ್ಚಿದ್ದಾರೆ.