ಮೃತ್ಯುಂಜಯ ಕಲ್ಮಠ ಗದಗ
ಕಪ್ಪತಗುಡ್ಡ ವನ್ಯಜೀವಿಧಾಮ ಅನುಷ್ಠಾನ ವಿಷಯದಲ್ಲಿ ಜನಪ್ರತಿನಿಧಿಗಳ ಮೂಗಿನ ನೇರಕ್ಕೆ ಪರಿಭಾವಿತ ಪರಿಸರ ಸೂಕ್ಷ್ಮ ಪ್ರದೇಶದ (ಎಕೋ ಸೆನ್ಸಿಟಿವ್ ಜೋನ್) ಗಡಿಯನ್ನು ನಿಗದಿಪಡಿಸಲಾಗಿದೆ ಎಂಬ ಸಂಗತಿ ಇದೀಗ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ವನ್ಯಜೀವಿಧಾಮ ಅನುಷ್ಠಾನದ ಸಂದರ್ಭದಲ್ಲಿ ಕನಿಷ್ಠ 100 ಮೀ. ದಿಂದ 10 ಕಿ.ಮೀ. ವ್ಯಾಪ್ತಿಯವರೆಗೆ ಎಕೋ ಸೆನ್ಸಿಟಿವ್ ಜೋನ್ ಎಂದು ಗುರುತಿಸಬಹುದು. ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ, ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ 5-6 ಕಿ.ಮೀ. ವ್ಯಾಪ್ತಿಯಲ್ಲಿ ಪರಿಭಾವಿತ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಲಾಗಿದೆ. ಆದರೆ, ಕಪ್ಪತಗುಡ್ಡ ವನ್ಯಜೀವಿಧಾಮದಲ್ಲಿ ಕೇವಲ 1 ಕಿ.ಮೀ. ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸಾಕಷ್ಟು ಅನುಮಾನ ಮತ್ತು ಕುತೂಹಲ ಮೂಡಿಸಿದೆ.
ಕೇವಲ 1 ಕಿ.ಮೀ. ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ನಿರ್ಧರಿಸಲು ಕಾರಣ ಏನು? ಇದರ ಹಿಂದಿರುವ ಮರ್ಮವಾದರೂ ಏನು? ಯಾರಿಗೆ ಅನುಕೂಲ ಮಾಡಿಕೊಡಲು ಈ ನಿರ್ಣಯ ಕೈಗೊಳ್ಳಲಾಯಿತು? ಬಗರ್ಹುಕುಂ ಸಾಗುವಳಿದಾರರ ಪರಿಸ್ಥಿತಿ ಏನು? ಕಲ್ಲಿನ ಕ್ವಾರಿ ಮತ್ತು ಕ್ರಷರ್ ಮಾಲೀಕರ ಹಿತ ಕಾಯಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯಾ? ಕಪ್ಪತಗುಡ್ಡದ ಸೆರಗಿನಲ್ಲಿರುವ ಗ್ರಾಮಗಳ ಜನರ ಅಭಿಪ್ರಾಯವನ್ನು ಏತಕ್ಕಾಗಿ ಪಡೆದುಕೊಳ್ಳಲಿಲ್ಲ? ಕೇವಲ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸೇರಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದ್ದು ನ್ಯಾಯವೇ? ಇಂತಹ ಅನೇಕ ಪ್ರಶ್ನೆ ಜನರಲ್ಲಿ ಮೂಡಿವೆ.
ಕಾಂಗ್ರೆಸ್ - ಜೆಡಿಎಸ್ ಸರ್ಕಾರ 2019 ಮೇ 6ರಂದು ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೊಷಿಸಿತು. ಕಪ್ಪತಗುಡ್ಡ 33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿದ್ದು, ಈ ಪೈಕಿ 24,415 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿ ಧಾಮವನ್ನಾಗಿ ಘೊಷಣೆ ಮಾಡಿತು. 17,872 ಹೆಕ್ಟೇರ್, 3844 ಹೆಕ್ಟೇರ್, 1379 ಹೆಕ್ಟೇರ್ ಮತ್ತು 1319 ಹೆಕ್ಟೇರ್ ಹೀಗೆ ನಾಲ್ಕು ಬ್ಲಾಕ್ಗಳನ್ನು ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಪ್ರತಿ ಬ್ಲಾಕ್ಗೂ ಪರಿಭಾವಿತ ಅತಿಸೂಕ್ಷ್ಮ ಪ್ರದೇಶ (ಎಕೋ ಸೆನ್ಸಿಟಿವ್ ಜೋನ್) ಗುರುತಿಸಬೇಕು ಹಾಗೂ ಮ್ಯಾನೇಜ್ವೆುಂಟ್ ಪ್ಲಾನ್ ರೂಪಿಸಿ ವರದಿ ಸಿದ್ಧಪಡಿಸಬೇಕು. ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆಯಾಗಿ ಆರೆಂಟು ತಿಂಗಳು ನಂತರ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನಿನಡಿ ಒಂದು ವರದಿ ಸಿದ್ಧಪಡಿಸಿದ್ದರು. ಅದರಲ್ಲಿ ಎಕೋ ಸೆನ್ಸಿಟಿವ್ ಜೋನ್ ವ್ಯಾಪ್ತಿಯನ್ನು 5-6 ಕಿ.ಮೀ. ಗೆ ನಿಗದಿಪಡಿಸಲಾಗಿತ್ತು. ಇದಕ್ಕೆ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಯಾರನ್ನು ಕೇಳಿ ವರದಿ ಸಿದ್ಧಪಡಿಸಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೆ ಮತ್ತೊಂದು ವರದಿ ಸಿದ್ಧಪಡಿಸಬೇಕು ಜತೆಗೆ ಎಕೋ ಸೆನ್ಸಿಟಿವ್ ಜೋನ್ ಮಿತಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಕೇವಲ 1 ಕಿ.ಮೀ. ವ್ಯಾಪ್ತಿಗೆ ಸೀಮಿತವಾಗಿದೆ ಎಂಬ ಮಾತಿದೆ.
ಕೇವಲ 200 ಮೀ. ನಿಗದಿಪಡಿಸಿ ಬೆಂಗಳೂರಿನ ವಿಧಾನಸೌಧ ಮೂರನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಕಪ್ಪತಗುಡ್ಡ ವನ್ಯಜೀವಿಧಾಮದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಕುರಿತು 2020 ಮೇ 22ರಂದು ಸಂಜೆ 4.30ಕ್ಕೆ ಮಹತ್ವದ ಸಭೆ ನಡೆಯಿತು. ಅದರಲ್ಲಿ ಕಪ್ಪತಗುಡ್ಡ ವನ್ಯಜೀವಿಧಾಮ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಅರಣ್ಯ ಸಚಿವ ಆನಂದ ಸಿಂಗ್ ಅಧ್ಯಕ್ಷತೆಯಲ್ಲಿ ಜರುಗಿದ ಅಂದಿನ ಸಭೆಯಲ್ಲಿ ಇಬ್ಬರು ಸಚಿವರು, ಸಂಸದರು, ಶಾಸಕರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು. ಕಲ್ಲು ಕ್ವಾರಿ, ಕ್ರಷರ್ ಕಾರ್ಯನಿರ್ವಹಣೆಗೆ ತೊಂದರೆ ಆಗಲಿದೆ ಎಂಬ ಉದ್ದೇಶವನ್ನು ಇಟ್ಟುಕೊಂಡೇ ಕೆಲವು ಜನಪ್ರತಿನಿಧಿಗಳು ಚರ್ಚೆ ಮಾಡಿದರು ಎಂಬ ಶಂಕೆ ಮೂಡಿದೆ. ಸಚಿವರೊಬ್ಬರು ವನ್ಯಜೀವಿಧಾಮ ಘೋಷಣೆಯೇ ಅವೈಜ್ಞಾನಿಕ ಎಂಬ ದಾಟಿಯಲ್ಲಿ ಮಾತನಾಡಿದರಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶವನ್ನು 100 ಮೀ., 200 ಮೀಟರ್ಗೆ ಸೀಮಿತಗೊಳಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಆದರೆ, ಅರ್ಧ ಶತಮಾನದಿಂದಲೂ ಭೂಮಿಯನ್ನು ಉಳುಮೆ ಮಾಡಿಕೊಂಡ ಬಂದಿರುವ ರೈತರ ಪರವಾಗಿ ಯಾವೊಬ್ಬ ಜನಪ್ರತಿನಿಧಿಗಳೂ ಮಾತನಾಡಲಿಲ್ಲ.
ಪರಿಸರ ಸೂಕ್ಷ್ಮ ಪ್ರದೇಶ : ಇದು ನಿಷೇಧಿತ ಪ್ರದೇಶವಾಗಿದ್ದರಿಂದ ಗಣಿಗಾರಿಕೆ, ಕ್ವಾರಿಗಳು ಕಾರ್ಯನಿರ್ವಹಣೆ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಕೈಗಾರಿಕೆಗಳನ್ನು ನಡೆಸಲು ಅವಕಾಶವಿಲ್ಲ. ಇದೆಲ್ಲವನ್ನೂ ನಿರ್ಧರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಪಂ ಸಿಇಒ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಈ ಸಮಿತಿಗೆ 100 ಮೀಟರ್ನಿಂದ 10 ಕಿ.ಮೀ. ವರೆಗೂ ಪರಿಸರ ಸೂಕ್ಷ್ಮ ಪ್ರದೇಶ ಎಂದು ಡಿಕ್ಲೇರ್ ಮಾಡುವ ಅವಕಾಶವಿರುತ್ತದೆ.</