ಜಿಲ್ಲೆ

ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಕ್ರಿಸ್ಮಸ್ ಗೀತೆಗಳ ಗಾಯನ

ಆಲೂರು:  ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ತಾಲೂಕಿನ  ಕ್ರೈಸ್ತರು  ಶನಿವಾರ ರಾತ್ರಿ ಹಾಗೂ ಭಾನುವಾರ  ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು. ಕಳೆದೆರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗಿ ಹಬ್ಬದ ಆಚರಣೆಯನ್ನು ಸರಳವಾಗಿ ಆಚರಿಸಿದ್ದ ಕ್ರೈಸ್ತ ಸಮುದಾಯ ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ಶನಿವಾರ ರಾತ್ರಿ ತಾಲೂಕಿನ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆಲೂರು ಪಟ್ಟಣ  ಸೇರಿದಂತೆ ಪಾಳ್ಯ ಹೋಬಳಿ ಜೊಸೆಫ್ ನಗರ, ಕಣತೂರು, ಮಗ್ಗೆ ಗ್ರಾಮಗಳಲ್ಲಿನ ಚೆರ್ಚ್ ಗಳಲ್ಲಿ  ಯೇಸುವಿನ ಜನನದ ವೃತ್ತಾಂತವನ್ನು ಪರಿಚಯಿಸುವ ಗೀತ ಗಾಯನವನ್ನು ನಟನೆಯ ಮೂಲಕ ಪ್ರದರ್ಶಿಸಲಾಯಿತು.

ಹಬ್ಬದ ವಿಶೇಷ ಬಲಿಪೂಜೆಯನ್ನು ಜೊಸೆಫ್ ನಗರ ಗ್ರಾಮದಲ್ಲಿರುವ ಸಂತ ಜೋಸೆಫರ ದೇವಾಲಯದ ಧರ್ಮಗುರುಗಳಾದ ಒಂದನೀಯ ಫಾದರ್ ಆಲ್ವಿನ್ ಜೊಸೆಫ್ ಡಿಸೋಜಾ  ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶ ನೀಡಿದ ಅವರು, ಪ್ರತಿಯೊಬ್ಬರಿಗೂ ನಿಜವಾದ ಗೌರವ ಪ್ರಾಪ್ತಿಯಾದಾಗ, ಪ್ರತಿಯೊಬ್ಬನೂ ಮಾನವೀಯತೆಯ ಸದ್ಗುಣವನ್ನು ತನ್ನದಾಗಿಸಿಕೊಂಡಾಗ ಮತ್ತು ಶಾಂತಿಯಿಂದ ಜೀವಿಸಿ ಆ ಶಾಂತಿಯ ಕಂಪನ್ನು ಎಲ್ಲೆಡೆ ಪಸರಿಸಿದಾಗ, ಇಂದು ಈ ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ದುಷ್ಟತನವನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯ. ಈ ಮೂರು ಶ್ರೇಷ್ಟ ಕಾಣಿಕೆಗಳಿಗೆ ಈ ಭೂಲೋಕವನ್ನು ಸ್ವರ್ಗಲೋಕವನ್ನಾಗಿಸುವ ಶಕ್ತಿಯಿದೆ, ಆದರೆ ಇದನ್ನು ನಮ್ಮದಾಗಿಸಿ ಸದ್ಗುಣ ಸಂಪನ್ನರಾಗಲು ನಮ್ಮಲ್ಲಿ ಇಚ್ಛಾಶಕ್ತಿಯ ಅಗತ್ಯತೆಯಿದೆ ಎಂದ ಅವರು. 

ಕಳೆದ ಹಲವು ದಶಕಗಳ ಹಿಂದೆ ಹೇಮಾವತಿ ಜಲಾಶಯದ ಹಿನ್ನೀರು ಪ್ರದೇಶದಿಂದ ಮುಳುಗಡೆ ಹೊಂದಿದ್ದ ಕುಟುಂಬಗಳು ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಜೋಸೆಫರ ಗ್ರಾಮಕ್ಕೆ ಬಂದು ಜೀವನ ಪ್ರಾರಂಭಿಸಿದರು ಅಂದಿನಿಂದ ಇಂದಿನವರೆಗೂ ಕ್ರೈಸ್ತ ಜನನದ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿರುವುದು ಬಹಳ ವಿಶೇಷವಾಗಿದೆ, 

ಯೇಸು ಜನಿಸಿದ ಗೋದಲಿಯೊಳಗಿನ ಚಿತ್ರಣವನ್ನು ಪ್ರೀತಿ ವರ್ಷವು  ಜೊಸೆಫ್ ನಗರ ಗ್ರಾಮದ  ಯುವಕ ಯುವತಿಯರು ಸಂತ ಜೋಸೆಫರ ದೇವಾಲಯದ ಆವರಣದಲ್ಲಿ  ಬಹಳ ಸುಂದರವಾಗಿ ನಿರ್ಮಿಸುತ್ತಾರೆ, ನವಸಮಾಜದ ನೈಜ ಚಿತ್ರಣ ಇದಾಗಿದ್ದು, ದೇವರು- ಮಾನವರ ನಡುವೆ ಸಂಧಾನವಿದೆ. ಗೋದಲಿಯಲ್ಲಿ ಪ್ರೀತಿ-ನೆಮ್ಮದಿಯಿದೆ, ಶಾಂತಿ-ಸಮಾಧಾನವಿದೆ; ಎಲ್ಲರ ನಡುವೆ ಸಹಬಾಳ್ವೆ ಇದೆ; ಪರಸ್ಪರ ಗಾಢವಾದ ಸಂಬಂಧವಿದೆ. ಅಲ್ಲಿ ದೂತರ ಗಣವಿದೆ, ಮಧುರ ಗಾನವಿದೆ. ಗೋದಲಿಯಲ್ಲಿ ಸರ್ವರ ಮಧ್ಯೆ ಐಕ್ಯತೆ ಇದೆ. ಅಲ್ಲಿ ಸರ್ವರಿಗೂ ಸ್ವಾಗತವಿದೆ, ಸರ್ವರಿಗೂ ಅವಕಾಶವಿದೆ. ಜುದೇಯಾದ ಕುರುಬರಂತೆ ಸಮಾಜದಲ್ಲಿ ಕಡೆಗಣಿಸಲ್ಪಟ್ಟವರಿಗೂ, ತುಳಿತಕ್ಕೊಳಗಾದವರಿಗೂ ಅಲ್ಲಿ ಸ್ಥಾನವಿದೆ. ಎಲ್ಲಕ್ಕೂ ಮಿಗಿಲಾಗಿ ಅಲ್ಲಿ ಕಂದ ಯೇಸುವಿನ ರೂಪದಲ್ಲಿ ದೇವರಿದ್ದಾರೆ,  ಎಲ್ಲರ ಹೃದಯವೆಂಬ ಗೋದಲಿಯಲ್ಲಿ ಸ್ವಾರ್ಥ, ದುರಹಂಕಾರ, ವಿಭಜನೆ, ದ್ವೇಷ, ಅಸತ್ಯ, ಅಪ್ರಾಮಾಣಿಕತೆ, ಕಲಹ ದೂರವಾಗಿ ಶಾಂತಿ, ಪ್ರೀತಿ, ಸಮಾನತೆ, ಅನುಕಂಪ, ದಯೆ, ನೆಲೆಸಿದಾಗ, ಅಲ್ಲಿ ದೇವರು ನೆಲೆನಿಲ್ಲುತ್ತಾರೆ ಎಂಬ ಸಂದೇಶವನ್ನು ತಿಳಿಸಿಕೊಡುತ್ತಾರೆ,

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಜೊಸೆಫ್ ನಗರ ಗ್ರಾಮದಲ್ಲಿನ ಚೆರ್ಚ್ ಆವರಣದಲ್ಲಿ  ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಶನಿವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧ ಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಗ್ರಾಮದ ಕ್ರೈಸ್ತ ಬಾಂಧವರು ಸ್ವಾಗತಿಸಿದರು.

ಹಬ್ಬದ ಅಂಗವಾಗಿ ಕಾನ್ವೆಂಟಿನ ಧರ್ಮಭಗಿಣಿಯರು, ಮಕ್ಕಳಿಂದ ಹಾಗೂ ಗ್ರಾಮದ ಯುವ ಸಂಘಟನೆಯ ಸದಸ್ಯರಿಂದ ಭಾನುವಾರ ರಾತ್ರಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಕ್ರೈಸ್ತ ಭಾಂಧವರು ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಫೊಟೋ ಕ್ಯಾಪ್ಶನ್ ಡಿ.25 ಎ.ಎಲ್.ಆರ್.ಪಿ 01

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಜೊಸೆಫ್ ನಗರ ಗ್ರಾಮದಲ್ಲಿನ ಚೆರ್ಚ್ ವಿದ್ಯುತ್ ದೀಪಾಲಂಕಾರ ಹಾಗೂ  ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿರುವುದು.