oppo_2 
ಜಿಲ್ಲೆ

ಚರಂಡಿಯಲ್ಲಿ ತುಂಬಿದ ಹೂಳು

ಹನೂರು: ಚರಂಡಿಯ ಡೆಕ್ ಸ್ಕ್ಯಾಬ್ ಅಡಿಯಲ್ಲಿ ಸಂಗ್ರಹವಾಗಿರುವ ಮಣ್ಣು ತೆರವುಗೊಳಿಸುವಂತೆ ತಾಲೂಕಿನ ಮಂಗಲ ಗ್ರಾಮದ ಕೋಣನ ಮಾರಮ್ಮ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.


ಬಡಾವಣೆಯಲ್ಲಿ ಕಳೆದ ಹಲವು ದಶಕದ ಹಿಂದೆ ಅವೈಜ್ಞಾನಿಕವಾಗಿ ಕಿರಿದಾದ ಚರಂಡಿ ನಿರ್ಮಿಸಲಾಗಿದ್ದು, ಜನರು ಸಂಚರಿಸುವ ಮಾರ್ಗದಲ್ಲಿ ಡೆಕ್‌ಸ್ಕಾೃಬ್ ನಿರ್ಮಿಸಲಾಗಿದೆ. ಇದರ ತಳಪಾಯದಲ್ಲಿ ಮಣ್ಣು ಹಾಗೂ ತ್ಯಾಜ್ಯ ಸಂಗ್ರಹವಾಗಿರುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕೊಳಚೆ ನೀರಿನ ಜತೆಗೆ ತ್ಯಾಜ್ಯ ತುಂಬಿ ತುಳುಕುತ್ತಿದೆ. ಇದರಿಂದ ದುರ್ವಾಸನೆ ಬೀರುವುದರ ಜತೆಗೆ ರಾತ್ರಿ ವೇಳೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತದೆ.


ನಿವಾಸಿಗಳ ಒತ್ತಾಯದ ಮೇರೆಗೆ ಇತ್ತೀಚೆಗೆ ಗ್ರಾಪಂ ಆಡಳಿತ ಚರಂಡಿಯ ಹೂಳನ್ನು ತೆರವುಗೊಳಿಸಿದೆ. ಆದರೆ ಡೆಕ್‌ಸ್ಕ್ಯಾಬ್ ಅಡಿಯಲ್ಲಿ ಸಂಗ್ರಹವಾಗಿರುವ ಮಣ್ಣು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿಲ್ಲ. ಇದರಿಂದ ಕೊಳಚೆ ನೀರು ನಿಂತಲ್ಲೇ ನಿಲ್ಲುವಂತಾಗಿದ್ದು, ಅನೈರ್ಮಲ್ಯ ಮನೆ ಮಾಡಿದೆ. ಹಾಗಾಗಿ ಹೂಳನ್ನು ತೆರವುಗೊಳಿಸಿದರೇನು ಪ್ರಯೋಜನ. ಇದರಿಂದ ಇಲ್ಲಿನ ನಿವಾಸಿಗಳಲ್ಲಿ ರೋಗ ರುಜಿನಗಳ ಭೀತಿ ಆವರಿಸಿದೆ. ಜತೆಗೆ ನೀರಿನ ತೇವಾಂಶದಿಂದ ಸಮೀಪದ ಮನೆಯ ಗೋಡೆಯೊಂದು ಬಿರುಕು ಬಿಟ್ಟಿದ್ದು, ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ.


ಮಣ್ಣು ತೆರವುಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಇದರಿಂದ ತುಂಬ ತೊಂದರೆಯನ್ನು ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಗ್ರಹವಾಗಿರುವ ಮಣ್ಣು ಹಾಗೂ ತ್ಯಾಜ್ಯವನ್ನು ತೆರವುಗೊಳಿಸುವುದರ ಮೂಲಕ ನೀರು ಸರಾಗವಾಗಿ ಹರಿಯಲು ಕ್ರಮವಹಿಸಬೇಕು. ಜತೆಗೆ ನೈರ್ಮಲ್ಯ ಕಾಪಾಡುವಂತೆ ನಿವಾಸಿ ಶಿವಮ್ಮ ಒತ್ತಾಯಿಸಿದ್ದಾರೆ.