ಜಿಲ್ಲೆ

ಚರಂಡಿ ತ್ಯಾಜ್ಯದಲ್ಲಿ ಕೊಚ್ಚಿಹೋಗುತ್ತಿದೆ ಅನುದಾನ?

ಅಶೋಕ್ ಕುಮಾರ್ ಎನ್

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ದಿನೇ ದಿನೆ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಪಟ್ಟಣ ಪಂಚಾಯಿತಿಯಿಂದ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ. ಚರಂಡಿ ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿದ್ದು ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಇದರಿಂದಾಗಿ ಸರ್ಕಾರದ ಅನುದಾನ ಚರಂಡಿ ತ್ಯಾಜ್ಯದಲ್ಲಿ ಕೊಚ್ಚಿಹೋಗುತ್ತಿದೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ.

ಹಟ್ಟಿಯ ಪೈ ಭವನ ಹತ್ತಿರ 11ನೇ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಂದ ಹರಿದು ಬರುವ ಕೊಳಚೆ ನೀರು ರಸ್ತೆ ಮೇಲೆಯೇ ನಿಲ್ಲುತ್ತಿದೆ. ಈ ತ್ಯಾಜ್ಯದಲ್ಲಿಯೇ ಜನರು ತಿರುಗಾಡುವಂತಾಗಿದೆ. ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿರುವುದರಿಂದ ದುರ್ನಾತ ಹರಡುತ್ತಿದ್ದು, ಸೊಳ್ಳೆ , ನಾಯಿ, ಹಂದಿಗಳ ಆಶ್ರಯಕ್ಕೆ ಅನುಕೂಲವೂ ಆಗಿದೆ. ಇದರಿಂದಾಗಿ ಜನರಿಗೆ ರೋಗ-ರುಜಿನ ಹರಡುತ್ತಿವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತ ಸಮಸ್ಯೆ ಪರಿಹರಿಸಬೇಖೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.