Oplus_16908288 
ಜಿಲ್ಲೆ

ಚಪ್ಪಲಿಯಲ್ಲಿ ಹೊಡೆದುಕೊಂಡು ಪ್ರತಿಭಟನೆ

ನಂಜನಗೂಡು: ಒಳ ಮೀಸಲು ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ನಂಜನಗೂಡಿನಲ್ಲಿ ಮಾದಿಗರ ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಅರೆ ಬೆತ್ತಲೆಯಾಗಿ ತಮಗೆ ತಾವೇ ಚಪ್ಪಲಿಯಲ್ಲಿ ಹೊಡೆದುಕೊಂಡು ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಮಂಗಳವಾರ ಜಮಾಯಿಸಿದ ಒಳಮಿಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ಪದಾಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಅರೆ ಬೆತ್ತಲೆಯಾಗಿ ತಮಗೆ ತಾವೇ ಚಪ್ಪಲಿಯಲ್ಲಿ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಭಾಸ್ಕರ್ ಪ್ರಸಾದ್ ಮಾತನಾಡಿ, ತಿ.ನರಸೀಪುರದಲ್ಲಿ ಶಾಂತ ರೀತಿಯಲ್ಲಿ ಖಾಸಗಿ ಸ್ಥಳದಲ್ಲಿ ನಾವು ಒಳಮೀಸಲಾತಿ ವಿಚಾರದಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದೆವು. ಪೊಲೀಸರು ನಮ್ಮನ್ನು ಬಂಧಿಸಿ, ಪೊಲೀಸ್ ಒಬ್ಬರು ಪ್ರತಿಭಟನಾಕಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗಾದರೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡುವುದು ತಪ್ಪೇ? ಸರ್ಕಾರ ತಕ್ಷಣವೇ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ಹೋದಲ್ಲಿ ನಾವು ಪ್ರಾಣಹಾನಿ ಮಾಡಿಕೊಳ್ಳುತ್ತೇವೆ. ಈಗ ಚಪ್ಪಲಿಯಲ್ಲಿ ಹೊಡೆದುಕೊಂಡಿರುವುದು ನಮಗಲ್ಲ, ಸರ್ಕಾರಕ್ಕೆ ಹೊಡೆದಿದ್ದೇವೆ. ಈ ಸರ್ಕಾರವನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಅವಾಚ್ಯ ಪದಗಳಿಂದ ನಿಂದಿಸಿರುವ ಪೊಲೀಸ್ ಪೇದೆಯನ್ನು ತಕ್ಷಣವೇ ಅಮಾನತು ಮಾಡಬೇಕು ಹಾಗೂ ಒಳ ಮೀಸಲಾತಿ ಜಾರಿ ಮಾಡುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕೆಲವು ಸಮಯ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನೆಯಲ್ಲಿ ವಕೀಲ ಅರುಣ್‌ಕುಮಾರ್, ಭಾಸ್ಕರ್‌ರಾವ್, ಪ್ರಸಾದ್, ಸುರೇಶ್, ನಾಗರಾಜು, ಗುಡ್ಡೆಮಾರನಹಳ್ಳಿ ರಾಹುಲ್, ಮಹದೇವಯ್ಯ, ಗೋಪಾಲಪುರ ಮಂಜುನಾಥ್, ನೀಲಕಂಠ ಬಳ್ಳಾರಿ, ಚಿಕ್ಕಮಗಳೂರು ಪುಟ್ಟಣ್ಣ, ಸರಗೂರು ಮಹದೇವಸ್ವಾಮಿ, ಹನುಮೇಶ್, ಭೀಮ್‌ರಾವ್, ವಿನೋದ್, ಅವಿನಾಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.