ಕಂಡಂಗಾಲದಲ್ಲಿ ಮುಕ್ತಾಯಗೊಂಡ 2ನೇ ವರ್ಷದ ಕೌಂಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಅಪ್ಪಂಡೇರಂಡ ತಂಡ. 
ಜಿಲ್ಲೆ

ಚಾಂಪಿಯನ್ ಪಟ್ಟ ಉಳಿಸಿಕೊಂಡ ಅಪ್ಪಂಡೇರಂಡ ತಂಡ

  • ಗೋಣಿಕೊಪ್ಪ: ಬಿಟ್ಟಂಗಾಲ ಸಮೀಪದ ಕಂಡಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ವತಿಯಿಂದ ಸ್ಥಳೀಯ ಶಾಲಾ ಮೈದಾನದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಮೂರು ನಾಡು ವ್ಯಾಪ್ತಿಯ 2ನೇ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿ ಸೋಮವಾರ ಮುಕ್ತಾಯಗೊಂಡಿತು.
  • ಕಳೆದ ಬಾರಿಯ ಚಾಂಪಿಯನ್ ಕಂಡಂಗಾಲದ ಅಪ್ಪಂಡೇರಂಡ ತಂಡ 2ನೇ ಬಾರಿಗೆ ವಿನ್ನರ್ಸ್ ಪ್ರಶಸ್ತಿ ಪಡೆಯುವುದರ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ಫೈನಲ್ ಪಂದ್ಯಾವಳಿಯಲ್ಲಿ 5-3 ಗೋಲಿನ ಅಂತರದಿಂದ ಮದ್ರೀರ ತಂಡವನ್ನು ಮಣಿಸಿದ ಅಪ್ಪಂಡೇರಂಡ ತಂಡ ಸತತ 2ನೇ ಬಾರಿಗೆ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.

  • ಫೈನಲ್ಸ್ ಪಂದ್ಯದಲ್ಲಿ ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ವಿಜೇತ ಅಪ್ಪಂಡೇರಂಡ ತಂಡ ಎದುರಾಳಿ ಆಟಗಾರರ ವಿರುದ್ಧ ರಕ್ಷಣಾತ್ಮಕ ಮತ್ತು ಸಂಘಟಿತವಾದ ಆಟವಾಡಿ ಪ್ರಶಸ್ತಿ ಗೆದ್ದುಕೊಂಡಿತು. ಅಪ್ಪಂಡೇರಂಡ ತಂಡದ ಪರವಾಗಿ ಆಡಿದ ಅತಿಥಿ ಆಟಗಾರರು ಇಡೀ ಪಂದ್ಯದುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದರಲ್ಲದೆ, ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

  • ವಿಜೇತ ತಂಡದ ಪರವಾಗಿ ಅತಿಥಿ ಆಟಗಾರರಾದ ಲಿಖಿತ್ 2 ಗೋಲು, ಆಭರಣ ಸುಧೇವ್, ನಿತಿನ್ ಮತ್ತು ಭರತ್ ತಲಾ ಒಂದು ಗೋಲು ಹೊಡೆದರು. ತಂಡದ ವಿರುದ್ಧ ದಾಖಲಾಗಬಹುದಾಗಿದ್ದ ಸಾಕಷ್ಟು ಗೋಲುಗಳನ್ನು ತಡೆಗೋಡೆಯಂತೆ ನಿಂತು ತಡೆದ ಅಪ್ಪಂಡೇರಂಡ ತಂಡದ ಗೋಲ್ ಕೀಪರ್ ಕೌಶಿಕ್ ಸುಬ್ರಮಣಿ ಪಂದ್ಯಾವಳಿಯ ಸರಣಿ ಪುರುಷೋತ್ತಮ ವಿಶೇಷ ಪ್ರಶಸ್ತಿಗೆ ಪಾತ್ರರಾದರು. ಅಪ್ಪಂಡೇರಂಡ ಯಶ್ವಂತ್ ಕಾಳಪ್ಪ ತರಬೇತುದಾರರಾಗಿ ಮತ್ತು ಅಪ್ಪಂಡೇರಂಡ ಸುರೇಶ್ ವಿಜೇತ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.