ಜಿಲ್ಲೆ

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಕಾಂಗ್ರೆಸ್‌ ದಿಕ್ಸೂಚಿ

ಹಾಸನ: ಕಾಂಗ್ರೆಸ್‌ನವರು ಯಾವುದೇ ಕುತಂತ್ರದ ರಾಜಕಾರಣ ಮಾಡಿದರೂ ನಿಖಿಲ್ ಅವರನ್ನು ಸೋಲಿಸಲು ಆಗಲ್ಲ.ಉಪಚುನಾವಣೆ ಫಲಿತಾಂಶವೇ ದಿಕ್ಸೂಚಿಯಾಗುತ್ತದೆ. ಫಲಿತಾಂಶದ ಬಳಿಕ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲಿವೆ ಕಾದು ನೋಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಾಸಕ ಎಚ್.ಪಿ.ಸ್ವರೂಪ್ ಅವರ ನಿವಾಸದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುತಂತ್ರ ರಾಜಕಾರಣದಿಂದ ಎರಡು ಚುನಾವಣೆಯಲ್ಲಿ ನಿಖಿಲ್ ಸೋಲಿಸಿದ್ದರು. ಚನ್ನಪಟ್ಟಣ ಉಪಚುನಾವಣೆಯಿಂದ ಕಾಂಗ್ರಸ್‌ನ ಅವನತಿ ಆರಂಭವಾಗುತ್ತದೆ. ಹಾಸನಾಂಬೆ ದೇವಿ ದರ್ಶನ ಪಡೆದು ಈ ಮಾತು ಹೇಳುತ್ತಿದ್ದೇನೆ ಬರೆದಿಟ್ಟುಕೊಳ್ಳಿ ಸವಾಲು ಹಾಕಿದರು.

ಜೆಡಿಎಸ್ ಮತ್ತು ಕುಮಾರಸ್ವಾಮಿಯನ್ನು ಚನ್ನಪಟ್ಟಣ ಕ್ಷೇತ್ರದಿಂದ ಹೊರ ಹಾಕುತ್ತೇವೆ. ಈಗಾಗಲೇ ಕುಮಾರಸ್ವಾಮಿಯನ್ನು ಮಂಡ್ಯಕ್ಕೆ ಕಳುಹಿಸಿದ್ದೇವೆ, ಉಪಚುನಾವಣೆ ಬಳಿಕ ರಾಮನಗರ ಜಿಲ್ಲೆಯಿಂದಲೇ ಖಾಲಿ ಮಾಡಿಸುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಚನ್ನಪಟ್ಟಣದ ಜನರು ನಮ್ಮನ್ನು ಯಾರು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ಸಾಬೀತುಪಡಿಸಲಿದ್ದಾರೆ. ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅದರಲ್ಲೂ ಚನ್ನಪಟ್ಟಣ ಕ್ಷೇತ್ರ ಚುನಾವಣೆ ದೇಶದ ಗಮನ ಸೆಳೆಯುವ ವಾತಾವರಣ ನಿರ್ಮಾಣ ಮಾಡಿದೆ. ನಮ್ಮ ವಿರೋಧಿಗಳು ನೀಡುತ್ತಿರುವ ಹೇಳಿಕೆಗಳಿಗೆ ಜನರೇ ಉತ್ತರ ನೀಡುತ್ತಾರೆ ಎಂದರು.

ಕುಮಾರಸ್ವಾಮಿ ದೋಖಾ ಮಾಡಲು ಹೊರಟಿದ್ದರು ಎಂಬ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ಯಾರು ಅಭ್ಯರ್ಥಿಯಾಗಬೇಕೆಂದು ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ. ಈಗ ಅಖಾಡ ಸಿದ್ಧವಾಗಿದೆ, ಅಭ್ಯರ್ಥಿ ಘೋಷಣೆಯಾಗಿದ್ದು, ಆ ಬಗ್ಗೆ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿ, ಡಾ.ಸಿ.ಎನ್.ಮಂಜುನಾಥ್ ಅವರನ್ನು ಗೆಲ್ಲಿಸಿದ್ದು ನಾನೇ, ಕುಮಾರಸ್ವಾಮಿ ಮಂತ್ರಿ ಮಾಡಿಸಿದ್ದು ನಾನೇ ಎಂದು ಹೇಳುವವರು, ಅಷ್ಟೆಲ್ಲ ಪ್ರಭಾವ ಇರುವವರು ಬಿಜೆಪಿಯಿಂದ ಬಿ-ಫಾರಂ ತೆಗೆದುಕೊಳ್ಳಲು ಆಗದೆ ಕಾಂಗ್ರೆಸ್‌ಗೆ ಹೋಗಿದ್ದಾರೆಯೇ? ಬಿಜೆಪಿಯಲ್ಲಿ ಅಷ್ಟರ ಮಟ್ಟಿಗೆ ಶಕ್ತಿ ಇತ್ತು ಎಂದು ಹೇಳುವವರು ಅಭ್ಯರ್ಥಿಯಾಗಲು ಏಕೆ ಕಾಂಗ್ರೆಸ್‌ಗೆ ಹೋಗಬೇಕಿತ್ತು. ಜೆ.ಪಿ.ನಡ್ಡಾ ಅವರೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವಂತೆ ಹೇಳಿದ್ದು, ಕೊನೆಗೆ ನಾನೇ ಬಿಜೆಪಿಯಿಂದಲೇ ಸ್ಪರ್ಧೆ ಮಾಡುವಂತೆ ಹೇಳಿದ್ದೇನೆ ಎಂದು ಉತ್ತರಿಸಿದರು.

ಒಂದುವರೆ ತಿಂಗಳ ಮೊದಲೇ ಕಾಂಗ್ರೆಸ್‌ನೊಂದಿಗೆ ಸಂಬಂಧ ಬೆಳೆಸಿಕೊಂಡು ಹೋಗಿದ್ದಾರೆ. ನಾನೇನು ನಿಖಿಲ್ ಅವರನ್ನು ಅಭ್ಯರ್ಥಿ ಮಾಡಲು ಹೋಗಿರಲಿಲ್ಲ. ಚನ್ನಪಟ್ಟಣ ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆ, ನಾವು ಮಾಡಿಕೊಂಡ ತಪ್ಪುಗಳಿಂದ ಕ್ಷೇತ್ರ ಕೈತಪ್ಪಿತ್ತು. ಆ ಹಿನ್ನಲೆ ಸರಿಪಡಿಸಿಕೊಳ್ಳಲು 2018ರಲ್ಲಿ ನನ್ನನ್ನು ರಾಮನಗರದಿಂದ ಚನ್ನಪಟ್ಟಣಕ್ಕೆ ಕರೆತಂದರು, ಅಲ್ಲಿಂದ ಜೆಡಿಎಸ್ ಭದ್ರವಾಗಿದೆ ಈಗಲೂ ಜನರು ಸಂಪೂರ್ಣವಾಗಿ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸವಿದೆ ಎಂದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ , ಸ್ವರೂಪ್ ಪ್ರಕಾಶ್ ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್ , ಪರಮೇಶ್ವರಪ್ಪ ಮುಖಂಡರಾದ ಬೈಲಹಳ್ಳಿ ಸತ್ಯನಾರಾಯಣ , ಸುಮುಖ ರಘು ,ಹೊಂಗೆರೆ ರಘು, ಎಸ್ ದ್ಯಾವೇಗೌಡ ಇತರರು ಇದ್ದರು.

ನಿಖಿಲ್ ಅಭಿಮಾನ್ಯುಅಲ್ಲ, ಅರ್ಜುನ

ನಿಖಿಲ್ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮಾನ್ಯು ಪಾತ್ರ ಮಾಡಿದ್ದು, ರಾಜಕೀಯ ಕ್ಷೇತ್ರದಲ್ಲೂ ಅಭಿಮನ್ಯು ರೀತಿ ಕಟ್ಟಿಹಾಕಲಾಗಿತ್ತು. ಆದರೆ, ಈ ಬಾರಿ ಚನ್ನಪಟ್ಟಣದ ಜನರು ಅರ್ಜುನನ ಪಾತ್ರ ನಿರ್ವಹಣೆ ಮಾಡುವಂತೆ ಹೇಳಿದ್ದಾರೆ. ಕಾಂಗ್ರೆಸ್‌ನವರು ಯಾವುದೇ ಕುತಂತ್ರದ ರಾಜಕಾರಣ ಮಾಡಿದರೂ ನಿಖಿಲ್ ಅವರನ್ನು ಸೋಲಿಸಲು ಆಗಲ್ಲ. ಈಗಿನ ಕಾಂಗ್ರೆಸ್ ಅಭ್ಯರ್ಥಿ, ಡಿ.ಕೆ.ಸಹೋದರರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅವರೆಲ್ಲ ಹಿಂದೆ ಯಾವೆಲ್ಲ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ ಅವರನ್ನು ಜನ ಮುಂದೆ ಮತ್ತೊಮ್ಮೆ ಪ್ರಸಾರ ಮಾಡಿದರೆ ಅವರೇನು ಎಂಬುದು ಜನರಿಗೆ ತಿಳಿಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲೇ ಸಮನ್ವಯ ಕೊರತೆ:

ಬಿಜೆಪಿ ನಾಯಕರು ಒಟ್ಟಾಗಿ ನಿಖಿಲ್ ಪರವಾಗಿ ಕೆಲಸ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರೇ ಹೆಸರು ಘೋಷಣೆ ಮಾಡಿ, ನಾಮಪತ್ರ ಸಲ್ಲಿಕೆ ವೇಳೆ ಆರ್.ಅಶೋಕ್. ಬಿ.ವೈ.ರಾಘವೇಂದ್ರ, ಡಾ.ಸುಧಾಕರ್, ಅಶ್ವಥ್‌ನಾರಾಯಣ ಅವರು ಆಗಮಿಸಿದ್ದರು. ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ರೀತಿಯಲ್ಲೂ ಸಮನ್ವಯದ ಕೊರತೆ ಇಲ್ಲ. ಸಮನ್ವಯ ಕೊರತೆ ಇರುವುದು ಕಾಂಗ್ರೆಸ್‌ನಲ್ಲಿ. ನಾನು ಎಲ್ಲಾ ಬಿಜೆಪಿ ನಾಯಕರೊಂದಿಗೆ ಉತ್ತಮವಾದ ಸಂಪರ್ಕ ಮತ್ತು ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ವಿರೋಧ ವ್ಯಕ್ತಪಡಿಸುವರು ಎಲ್ಲಾ ಪಕ್ಷದಲ್ಲೂ ಇರುತ್ತಾರೆ ಅವರ ಬಗ್ಗೆ ತಲೆಕೆಡಿಸಿಕೊಂಡು ಕೂರಲು ಆಗಲ್ಲ. ಸಿ.ಪಿ.ಯೋಗೇಶ್ವರ್ ಬಂದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ. ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕೈನಾಯಕರಿಗೆ ತಿರುಗೇಟು ನೀಡಿದರು.