ಜಿಲ್ಲೆ

ಚನ್ನಕೇಶವಸ್ವಾಮಿ ದೇಗುಲದ ಆವರಣದಲ್ಲಿ ಯೋಗಾಭ್ಯಾಸ

ಬೇಲೂರು: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಆವರಣದಲ್ಲಿ ಶನಿವಾರ ಸಾವಿರಾರು ಜನರು ಯೋಗ ಪ್ರದರ್ಶನ ನೀಡಿದರು.

ತಾಲೂಕು ಆಡಳಿತ, ಪುರಸಭೆ, ದೇಗುಲ ಆಡಳಿತ, ನಮನ್ ನಿಮಾನ್ಸ್ ಬೆಂಗಳೂರು, ಪತಂಜಲಿ ಮತ್ತು ರಾಘವೇಂದ್ರ ಯೋಗ ಕೇಂದ್ರ, ರೋಟರಿ, ಲಯನ್ಸ್ ಸಂಸ್ಥೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ನಮನ್ ನಿಮಾನ್ಸ್ ವೈದ್ಯ ಡಾ.ನವೀನ್ ಕುಮಾರ್, ಯೋಗವು ಮನುಷ್ಯನ ಮನಸ್ಸು ಮತ್ತು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು. ಯೋಗದಿಂದ ನಮ್ಮಗಳ ಮಾನಸಿಕ ಆರೋಗ್ಯ ಗಟ್ಟಿಗೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯೋಗದ ಬಗ್ಗೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಕಳೆದ 10 ವರ್ಷಗಳಿಂದ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಮ್ಮ ನಮನ್ ತಂಡ ತಾಲೂಕಿನಲ್ಲಿರುವ ಪ್ರತಿ ಮನೆಗೂ ಭೇಟಿ ನೀಡಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಬಸವರಾಜು ಕಾಟಪ್ಪ ಸಿಗ್ಗಾವಿ, ಬಿಆರ್‌ಸಿ ಶಿವಮರಿಯಪ್ಪ, ಶ್ರೀ ಚನ್ನಕೇಶವಸ್ವಾಮಿ ದೇಗುಲ ಇಒ ಯೋಗೀಶ್, ಆರ್‌ಐ ನಟರಾಜ್, ಡಾ.ಸುಧಾ, ಯೋಗ ಕೇಂದ್ರದ ಪ್ರಕಾಶ್, ರುದ್ರಯ್ಯ, ವಿವಿಧ ಇಲಾಖೆ ಅಧಿಕಾರಿಗಳು, ಯೋಗ ಪಟುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.