ಚಿತ್ರದುರ್ಗ: ಕೆಳಗೋಟೆಯ ಸಿ.ಕೆ.ಪುರ ಬಡಾವಣೆಯಲ್ಲಿರುವ ಚನ್ನಕೇಶವ ಸ್ವಾಮಿ ಅಡ್ಡಪಲ್ಲಕ್ಕಿ ಮೆರವಣಿಗೆ ಶ್ರೀದೇವಿ, ಭೂದೇವಿ ಉತ್ಸವ ಮೂರ್ತಿಗಳ ಸಹಿತ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಜರುಗಿತು.
ದೇಗುಲದಲ್ಲಿ ಬೆಳಗ್ಗೆಯಿಂದಲೇ ಅಂಕುರಾರ್ಪಣ, ಗಂಗಾ ಪೂಜೆ, ಧ್ವಜಾರೋಹಣ, ಕಳಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಮತ್ತು ರಾಕ್ಷೋಘ್ನ ಹೋಮ ಸೇರಿ ಇತರೆ ಪೂಜಾ ಕೈಂಕರ್ಯ ನೆರವೇರಿದವು.
ನಂತರ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿ ಉತ್ಸವ ಮೂರ್ತಿಯನ್ನು ಪುಷ್ಪಗಳಿಂದ ಅಲಂಕರಿಸಿ, ಅಡ್ಡಪಲ್ಲಕ್ಕಿಯೊಳಗೆ ಪ್ರತಿಷ್ಠಾಪಿಸಲಾಯಿತು. ನಂತರ ಮೆರವಣಿಗೆ ದೇಗುಲದಿಂದ ಆರಂಭವಾಗಿ ಕೆಳಗೋಟೆ, ಕೆಎಸ್‌ಆರ್‌ಟಿಸಿ ಹಳೆ ಬಸ್ ಡಿಪೊ, ಅಂಬಾಭವಾನಿ ದೇಗುಲ ಮುಂಭಾಗ ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಾ ದೇಗುಲ ತಲುಪಿತು.
ಸ್ವಾಮಿಯ ಕಲ್ಯಾಣೋತ್ಸವ ಹಾಗೂ ಅಷ್ಠಾವಧಾನ ಪೂರ್ವಕ ಉಯ್ಯಲೋತ್ಸವ ಜರುಗಿತು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು.
24ರಂದು ಮಧ್ಯಾಹ್ನ 12.20ರಿಂದ 1.18ರವರೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ರಥೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ದೇಗುಲದ ಸಂಚಾಲಕ ಪಾತ್ಯರಾಜನ್ ಕೋರಿದ್ದಾರೆ.