ದೊಡ್ಡಬಳ್ಳಾಪುರ: ತೂಬಗೆರೆ ಹೋಬಳಿಯ ಕುರುವಿಗೆರೆ ಚನ್ನಕೇಶವ ದೇವಾಲಯದಲ್ಲಿ ಗುರುವಾರ ದಲಿತರು ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಗ್ರಾಮದ ಸವರ್ಣೀಯರು ಕೂಡ ದಲಿತರಿಗೆ ಮುಕ್ತ ಆಹ್ವಾನ ನೀಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಜಾತಿ ವೈಷಮ್ಯ, ಅಸ್ಪೃಶ್ಯತೆ ಆಚರಣೆ ಆರೋಪಕ್ಕೆ ತೆರೆ ಎಳೆದರು. ಗ್ರಾಮದ ಈ ಸೌಹಾರ್ದ ವಾತಾವರಣಕ್ಕೆ ತಹಸೀಲ್ದಾರ್ ನಡೆಸಿದ ಸಂಧಾನ ಸಭೆ ಯಶಸ್ವಿಯಾಯಿತು.
ತಹಸೀಲ್ದಾರ್ ಟಿ. ಶಿವರಾಜ್, ಗ್ರಾಮಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರ ಸಭೆ ನಡೆಸಿದರು.
ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ. ಅದನ್ನು ನಿಷೇಧಿಸಲಾಗಿದೆ. ಕುರುವಿಗೆರೆಯಲ್ಲಿ ಅಸ್ಪೃಶ್ಯತೆ ನಡೆದ ಆರೋಪವಿದೆ. ಇದು ನಿಜವೇ ಎಂದು ತಹಸೀಲ್ದಾರ್ ಪ್ರಶ್ನಿಸಿದರು. ಈ ವೇಳೆ ಕೆಲ ದಲಿತ ಮಹಿಳೆಯರು, ಯುವಕರು, ನಮಗೆ ದೇವಾಲಯದೊಳಗೆ ಪ್ರವೇಶವಿಲ್ಲ ಎಂದು ಆರೋಪಿಸಿದರು. ಸವರ್ಣೀಯ ಮುಖಂಡರು, ನಾವೆಂದೂ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿಲ್ಲ. ಅವರು ಬಂದೂ ಇಲ್ಲ. ಈಗ ಕೆಲ ವೈಯಕ್ತಿಕ, ರಾಜಕೀಯ ಕಾರಣಗಳಿಂದ ಈ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದರು. ಕೆಲಕಾಲ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು.
ಎಲ್ಲರನ್ನೂ ಸಮಾಧಾನಪಡಿಸಿದ ತಹಸೀಲ್ದಾರ್, ದೇವಾಲಯ ಪ್ರವೇಶ ಸಾರ್ವಜನಿಕರಿಗೆ ಮುಕ್ತವಾಗಿರಬೇಕು. ಇದಕ್ಕೆ ಯಾರೂ ಅಡ್ಡಿಪಡಿಸಬಾರದು. ಎಲ್ಲರೂ ಒಟ್ಟಾಗಿ ಬನ್ನಿ ಎಂದು ಜತೆಯಲ್ಲಿ ಕರೆದೊಯ್ದರು.
ಈ ವೇಳೆ ಗ್ರಾಮದ ಹಿರಿಯ ಮುಖಂಡ, ಜಿಪಂ ಮಾಜಿ ಸದಸ್ಯ ನರಸಿಂಹಯ್ಯ ಹಾಗೂ ಇತರ ಮುಖಂಡರು, ದೇವಾಲಯದ ಪ್ರವೇಶ ದ್ವಾರದಲ್ಲಿ ನಿಂತು, ಒಳಗಡೆ ಬನ್ನಿ ಎಂದು ಆಹ್ವಾನಿಸಿದರು.
ದೇಗುಲಕ್ಕೆ ಮುಕ್ತ ಪ್ರವೇಶವಿರಬೇಕು: ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಎಂದು ಲಕ ಹಾಕಿಸಬೇಕು ಎಂದು ತಾಕೀತು ಮಾಡಿದ ತಹಸೀಲ್ದಾರ್, ಗ್ರಾಮದಲ್ಲಿ ಸಾರ್ವಜನಿಕ ನೀರಿನ ಕೊಳಾಯಿ ಬಳಿ ಕೂಡ ಭೇದಭಾವ ಮಾಡಬಾರದು. ಈ ರೀತಿ ಕಂಡು ಬಂದರೆ ವಾಟರ್‌ಮನ್ ಪಂಚಾಯಿತಿ ಪಿಡಿಒಗೆ ತಿಳಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
ಗ್ರಾಮಸ್ಥರು ಕೂಡ ಪ್ರತಿಯೊಬ್ಬರ ಅಭಿಪ್ರಾಯ ಗೌರವಿಸಬೇಕು. ಪರಸ್ಪರ ಸೌಹಾದರ್ಯುತವಾಗಿ ಬದುಕಬೇಕು. ಸಂವಿಧಾನದ ಆಶಯಗಳಾದ ಸಮಾನತೆ, ಭ್ರಾತೃತ್ವ, ಜಾತ್ಯತೀತ ಮೌಲ್ಯಗಳಿಗೆ ಗೌರವ ನೀಡಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ನರಸಿಂಹಯ್ಯ ಮಾತನಾಡಿ, ಗ್ರಾಮದಲ್ಲಿ ಸೌಹಾದರ್ಯುತವಾಗಿ ಜನರು ಜೀವನ ನಡೆಸುತ್ತಿದ್ದಾರೆ. ಎಂದೂ ಜಾತಿ ವೈಷಮ್ಯ ಬಂದಿರಲಿಲ್ಲ. ಆದರೆ, ಕೆಲವರ ವೈಯಕ್ತಿಕ ಪ್ರತಿಷ್ಠೆ, ವೈಷಮ್ಯದಿಂದ ಇಂತಹದ್ದೊಂದು ವಿವಾದ ಸೃಷ್ಟಿಯಾಗಿದ್ದು ದುರದೃಷ್ಟಕರ. ದೇವಾಲಯ ಪ್ರವೇಶ ಮುಕ್ತ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.