ಜಿಲ್ಲೆ

ಚನ್ನಕೇಶವ ದೇಗುಲಕ್ಕೆ ಆಭರಣಗಳ ಹಸ್ತಾಂತರ

ಬೇಲೂರು: ವಿಶ್ವವಿಖ್ಯಾತ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಶ್ರೀ ಚನ್ನಕೇಶವಸ್ವಾಮಿ ಹಾಗೂ ಸೌಮ್ಯನಾಯಕಿ ಅಮ್ಮನವರಿಗೆ ಧರಿಸುವ ಚಿನ್ನದ ಆಭರಣಗಳನ್ನು ತಾಲೂಕು ಕಚೇರಿಯ ಖಜಾನೆಯಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ದೇಗುಲ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅಡ್ಡ ಪಲ್ಲಕ್ಕಿಯಲ್ಲಿ ದೇಗುಲಕ್ಕೆ ತರಲಾಯಿತು.

ಶ್ರೀಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಯುಗಾದಿ ಹಬ್ಬದ ದಿನದಿಂದ ಪ್ರಾರಂಭವಾಗುವ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕು ಕಚೇರಿಯ ಖಜಾನೆಯಲ್ಲಿಟ್ಟಿದ್ದ ದೇವರ ಚಿನ್ನದ ಆಭರಣಗಳನ್ನು ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ದೇಗುಲಕ್ಕೆ ತಂದು ಅರ್ಚಕರಿಗೆ ಒಪ್ಪಿಸಲಾಗಿದೆ.

ಅರ್ಚಕರು ಆಭರಣಗಳನ್ನು ಯುಗಾದಿ ಹಬ್ಬದ ದಿನದಂದು ದೇವರಿಗೆ ಅಲಂಕರಿಸಿ ವಿಶೇಷ ಪೂಜೆ ನಡೆಸಲಿದ್ದಾರೆ. ನಂತರ 20 ದಿನಗಳ ಕಾಲ ದೇವರ ವಿಗ್ರಹದಲ್ಲಿ ಚಿನ್ನ ಮತ್ತು ವಜ್ರದ ಆಭರಣ ಕಂಗೊಳಿಸಲಿದೆ. ಹಿಂದಿನ ಸಂಪ್ರದಾಯದಂತೆ ದೇವಾಲಯದ ಉತ್ಸವ ಆಚರಿಸಲಾಗುವುದು. ಯಾವುದೇ ಬದಲಾವಣೆಗಳಿರುವುದಿಲ್ಲ. ಈ ಬಾರಿ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲ ಭಕ್ತರಿಗೂ ಪ್ರಸಾದ, ಪಾನಕ ವ್ಯವಸ್ಥೆಯನ್ನು ಸಂಘ ಸಂಸ್ಥೆಗಳೊಡಗೂಡಿ ಮಾಡಲಿದ್ದು, ಇದಕ್ಕೆ ಎಲ್ಲ ಭಕ್ತರು, ಆಡಳಿತ ಮಂಡಳಿ ಸದಸ್ಯರು ಸಹಕಾರ ನೀಡಬೇಕು ಎಂದರು.

ದೇಗುಲದ ಇಒ ವಿದ್ಯುಲ್ಲತಾ ಮಾತನಾಡಿ, 2023 ನೇ ಸಾಲಿನ ಜಾತ್ರೆ ಮತ್ತು ರಥೋತ್ಸವದ ಅಂಗವಾಗಿ ದೇವರ ಆಭರಣಗಳನ್ನು ತಂದು ಎಲ್ಲ ರೀತಿಯ ಪೂಜೆ ವಿಧಾನವನ್ನು ಮಾಡುವ ಮೂಲಕ ನಾಡಗೌಡರ ಹಾಗೂ ಪಟೇಲರ ಅಡ್ಡೆಗಾರರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಿಗೆ ಒಡವೆಗಳನ್ನು ಹಸ್ತಾಂತರಿಸಿದ್ದು, 18 ದಿನಗಳ ಕಾಲ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಮಾ.27 ರಿಂದ ಏಪ್ರಿಲ್ 9ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದರು.

ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಶಂಕರ್, ವಿಜಯಲಕ್ಷ್ಮೀ, ಶ್ರೀನಿವಾಸ, ಪ್ರಮೋದ್, ರವೀಂದ್ರ, ವೆಂಕಟೇಶ್, ಅರ್ಚಕರಾದ ಶ್ರೀನಿವಾಸ ಭಟ್ಟರ್, ನರಸಿಂಹ ಭಟ್ಟರ್ ಇದ್ದರು.