ವಿಜಯವಾಣಿ ಸುದ್ದಿಜಾಲ ಕುಮಟಾ
ತಾಲೂಕಿನ ದೀವಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥಕ್ಕೆ ಮೇಲ್ಸೇತುವೆ, ಸರ್ವಿಸ್ ರಸ್ತೆ, ಹೆದ್ದಾರಿ ದೀಪ ಹಾಗೂ ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿ, ದೀವಗಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಪ್ನಾಸ್ಥಳೀಯರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿದರು.
ದೀವಗಿಯ ಕೆಳಗಿನಕೇರಿಯಿಂದ ಮೆರವಣಿಗೆ ಹೊರಟು, ರಾಷ್ಟ್ರೀಯ ಹೆದ್ದಾರಿಯವರೆಗೆ ಘೋಷಣೆ ಕೂಗುತ್ತಾ ಸಾಗಿದರು. ಬಳಿಕ ದೀವಗಿ ಗ್ರಾ.ಪಂ ಎದುರು ಜಮಾವಣೆಗೊಂಡು ಧರಣಿ ನಡೆಸಿದರು. ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಅವರೊಂದಿಗೆ ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ಕಳೆದ ಐದು ವರ್ಷದಿಂದ ದೀವಗಿಯಲ್ಲಿ ಚತುಷ್ಪಥಕ್ಕೆ ಸುರಕ್ಷಿತ ಮೇಲ್ಸೇತುವೆ, ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸುತ್ತಲೇ ಬಂದಿದ್ದೇವೆ. ಸರ್ವೀಸ್ ರಸ್ತೆಯನ್ನು ಅರೆಬರೆ ಕಾಮಗಾರಿ ಮಾಡಿ ಬಿಡಲಾಗಿದೆ. ಜನರು ಜೀವಭಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಮೀಪದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇರುವುದರಿಂದ ನೂರಾರು ಮಕ್ಕಳು ಓಡಾಡುತ್ತಾರೆ. ಒಮ್ಮೆಲೇ ಬರುವ ವಾಹನದಿಂದಾಗಿ ರಸ್ತೆ ದಾಟುವುದು ಕಷ್ಟಸಾಧ್ಯವಾಗಿದೆ. ಇದೇ ಕಾರಣಕ್ಕೆ ಹಲವಾರು ತೀವ್ರ ಸ್ವರೂಪದ ಅಪಘಾತಗಳು ಘಟಿಸಿವೆ.
ಜನರ ಸುರಕ್ಷತೆಗಾಗಿ ಇಲ್ಲಿ ಮೇಲ್ಸೇತುವೆ, ಸರ್ವಿಸ್ ರಸ್ತೆ ಹಾಗೂ ಹೈಮಾಸ್ಟ್ ದೀಪ ಇವುಗಳನ್ನು ಅಳವಡಿಸಬೇಕು. ಚತುಷ್ಪಥದ ಒಂದು ಮಾರ್ಗವನ್ನು ಬಂದ್ ಮಾಡಿ ಅದನ್ನೇ ಸರ್ವಿಸ್ ರಸ್ತೆಯನ್ನಾಗಿ ಮಾಡಿ ಅಥವಾ ಎರಡು ಕಡೆ ಬ್ಯಾರಿಕೇಡ್ ಅಳವಡಿಸಿ ಜನಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ, ಎನ್.ಎಚ್.ಎ.ಐ ಮೇಲಾಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿಗೆ ಬರುವುದಾಗಿ ತಿಳಿಸಿದ್ದಾರೆ. ನಿಮ್ಮೆಲ್ಲರ ಸಮ್ಮುಖದಲ್ಲಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಮತ್ತು ತುರ್ತಾಗಿ ಬ್ಯಾರಿಕೇಡ್ ಅಳವಡಿಸಲು ಒಪ್ಪಿಗೆ ನೀಡಿದರು. ಈ ಬಳಿಕ ಗ್ರಾಮಸ್ಥರು ಧರಣಿ ಹಿಂಪಡೆದರು. ಸಾಮಾಜಿಕ ಕಾರ್ಯಕರ್ತ ಆರ್.ಕೆ.ಅಂಬಿಗ, ದೀವಗಿ ಗ್ರಾ.ಪಂ ಸದಸ್ಯ ವಿನಾಯಕ ದೇಶಭಂಡಾರಿ, ಪ್ರೆಂಕಿ ಫರ್ನಾಂಡೀಸ್, ಮಂಗಲಾ ಭಟ್ಟ, ಸ್ಥಳೀಯರಾದ ಮೈಕಲ್ ಫರ್ನಾಂಡೀಸ್, ಗಂಗಾಧರ ಅಂಬಿಗ ಇನ್ನಿತರರು ಇದ್ದರು.