ಅರಸೀಕೆರೆ: ತಾಲೂಕಿನಲ್ಲಿ ಹಾದು ಹೋಗುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಗತಿಯನ್ನುಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಾಲೂಕು ಮಟ್ಟದ ಅಧಿಕಾರಿಗಳ ತಂಡದೊಂದಿಗೆ ತೆರಳಿ ಮಂಗಳವಾರ ಪರಿಶೀಲನೆ ನಡೆಸಿದರು.
ಅಲ್ಲದೇ ಬಂಡಿಹಳ್ಳಿ, ಕೆರೆ ಕೋಡಿಹಳ್ಳಿ, ಚಿಕ್ಕೂರುಗೇಟ್, ಜಾಜೂರು ಕೆಳಸೇತುವೆ, ಮಲ್ಲಾಪುರ ಹಾಗೂ ಬೆಂಡೆಕೆರೆ ಆಸುಪಾಸಿನಲ್ಲಿನ ಕಾರ್ಯವೈಖರಿ ಕುರಿತು ಅಗತ್ಯ ವಿವರ ಸಂಗ್ರಹಿಸಿದರು.
ಭಾನುವಾರ ರಾತ್ರಿ ಗಾಂಧಿನಗರ-ಚಲುವನಹಳ್ಳಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಜೀವ ಕಳೆದುಕೊಂಡಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯವೈಖರಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿಗಳು ಅಪಘಾತ ನಡೆದಿರುವ ಸ್ಥಳ ಪರಿಶೀಲನೆ ಜತೆಗೆ ತಿರುವು, ಕೆಲಸ ಸ್ಥಗಿತವಾಗಿರುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ಸಿರಿ ಅವರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಸೀಲ್ದಾರ್ ವಿಭಾ ವಿ ರಾಥೋಡ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಇನ್ನಿತರರು ಹಾಜರಿದ್ದರು.