ಶಂಕರ ಶರ್ಮಾ ಕುಮಟಾ
ಪಟ್ಟಣ ವ್ಯಾಪ್ತಿಯಲ್ಲಿ ನಡೆದಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಡಿ ಇನ್ನೂ ಅರೆಬರೆ ಸ್ಥಿತಿಯಲ್ಲಿರುವ ಒಳಚರಂಡಿ ಮುಚ್ಚಿಹೋಗುತ್ತಿದ್ದು ಸರ್ಕಾರದ ಹಣ ಮಣ್ಣು ಪಾಲಾಗುತ್ತಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಡಾಂಬರೀಕರಣ ತಿಂಗಳ ಹಿಂದಷ್ಟೇ ಮುಗಿದಿದೆ. ಆದರೆ, ಕೆಲ ಕಡೆಗಳಲ್ಲಿ ಒಳಚರಂಡಿ ಮ್ಯಾನ್ಹೋಲ್ಗಳ ಮೇಲೆಯೇ ಡಾಂಬರು ಹಾಕಿ ಮುಚ್ಚಲಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸದ್ಯ ಮಣಕಿಯ ಮಾನೀರದಿಂದ ಹಂದಿಗೋಣದವರೆಗೆ ನಡೆದಿರುವ ರಾ.ಹೆ. ಚತುಷ್ಪಥ ಕಾಮಗಾರಿಯಲ್ಲೂ ಒಳಚರಂಡಿ ವ್ಯವಸ್ಥೆ ಮಣ್ಣೊಳಗೆ ಮುಚ್ಚಲ್ಪಡುತ್ತಿದೆ. ಚತುಷ್ಪಥಕ್ಕಾಗಿ ವಿಸ್ತರಣೆಗೊಳ್ಳುತ್ತಿರುವುದರಿಂದ ಒಳಚರಂಡಿ ಪೈಪ್ಲೈನ್ ಹಾಗೂ ಮ್ಯಾನ್ಹೋಲ್ಗಳು ಹೆಚ್ಚು ಕಡಿಮೆ ರಾಷ್ಟ್ರೀಯ ಹೆದ್ದಾರಿಯ ನಡುವೆಯೇ ಬರುತ್ತಿದ್ದು, ನೆಲದೊಳಗೆ ಸೇರುತ್ತಿದೆ. ಇದನ್ನೆಲ್ಲ ಸ್ಥಳಾಂತರ ಮಾಡಬೇಕಾದವರು ಯಾರು? ಎಂಬ ವಿಷಯವೇ ಅಸ್ಪಷ್ಟವಾಗಿದ್ದು, ಪುರಸಭೆ, ರಾ.ಹೆ. ಪ್ರಾಧಿಕಾರ ಹಾಗೂ ಒಳಚರಂಡಿ ಮಂಡಳಿ ಒಬ್ಬರಿಗೊಬ್ಬರು ಬೆಟ್ಟು ಮಾಡುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಸಮಸ್ಯೆಗಳ ಗುಚ್ಛವೇ ಎದುರಾಗಲಿದ್ದು, ಒಳಚರಂಡಿ ವ್ಯವಸ್ಥೆಗಾಗಿ ಪಾವತಿಯಾದ ಕೋಟ್ಯಂತರ ರೂಪಾಯಿ ವ್ಯರ್ಥ ಎಂಬಂತಾಗಲಿದೆ.
ಈ ಬಗ್ಗೆ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಒಳಚರಂಡಿ ಮಂಡಳಿ ಎಇಇ ಎಸ್.ವಿ. ಬಾಂದೇಕರ, ಕುಮಟಾದಲ್ಲಿ ಒಳಚರಂಡಿ ಪೈಪ್ಲೈನ್ ಮಾರ್ಗದ ಸ್ಥಳಾಂತರದ ಸಮಸ್ಯೆ ಬಂದಿದೆ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಳಗೊಳ್ಳುವ ಒಳಚರಂಡಿ ಮಾರ್ಗದ ಸ್ಥಳಾಂತರಕ್ಕೆ ಬೇಕಾದ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ಉಳಿದಂತೆ ಪಟ್ಟಣದೊಳಗೆ ರಸ್ತೆ ಕಾಮಗಾರಿ ಮಾಡುವಾಗ ಒಳಚರಂಡಿ ಮಾರ್ಗ ಸಂಪೂರ್ಣ ಮುಚ್ಚಿಹೋಗದಂತೆ ಪುರಸಭೆಯವರೂ ಕಾಳಜಿ ವಹಿಸಬೇಕು. ಏಕೆಂದರೆ ಮುಂದಿನ ದಿನದಲ್ಲಿ ಅವರೇ ನಿರ್ವಹಿಸಬೇಕಾದ ವ್ಯವಸ್ಥೆ ಅದು ಎಂದಿದ್ದಾರೆ.
ಅಸಮರ್ಪಕತೆ ಒಂದೊಂದಾಗಿ ಬೆಳಕಿಗೆ
ಕುಮಟಾದಲ್ಲಿ ಚತುಷ್ಪಥ ಬೈಪಾಸ್ ವಿವಾದ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಗಡಿಬಿಡಿಯಲ್ಲಿ ನಡೆದ ಒಳಚರಂಡಿ ಕಾಮಗಾರಿಯ ಅಸಮರ್ಪಕತೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಪಟ್ಟಣದೊಳಗೆ ಚತುಷ್ಪಥದ ಖಚಿತತೆ ಇಲ್ಲದೆ, ಹಾಲಿ ಇದ್ದ ಹೆದ್ದಾರಿಯ ಅಂಚಿಗೆ ಕಾಲುವೆ ಹೊಡೆದು ಒಳಚರಂಡಿ ಮಾರ್ಗ ನಿರ್ವಿುಸಿದ್ದರ ಬೆಲೆಯನ್ನು ಈಗ ತೆರಬೇಕಿದೆ. ನಿಯಮದಂತೆ ಚತುಷ್ಪಥ ಮಾಡುವ ಸಂದರ್ಭದಲ್ಲಿ ಕಾಮಗಾರಿ ಗುತ್ತಿಗೆ ಪಡೆದವರೇ ಒಪ್ಪಿತ ಕರಾರಿನಂತೆ ಸಾರ್ವಜನಿಕ ನೀರು, ವಿದ್ಯುತ್, ದೂರವಾಣಿ, ತ್ಯಾಜ್ಯ ಮುಂತಾದ ಅಗತ್ಯ ಸೇವೆಗಳ ಸಂಪರ್ಕಗಳನ್ನು ರಸ್ತೆಯಂಚಿಗೆ ಸುರಕ್ಷಿತ ಸ್ಥಳಾಂತರ ಮಾಡಬೇಕು. ಆದರೆ, ಎಲ್ಲೆಡೆ ಹೆದ್ದಾರಿ ಅಂಚಿಗೆ ಇದ್ದ ವಿದ್ಯುತ್ ಕಂಬಗಳನ್ನು ಮಾತ್ರ ಸ್ಥಳಾಂತರಿಸುವ ಲಕ್ಷಣಗಳಿದ್ದು, ನೀರು ಮತ್ತು ಒಳಚರಂಡಿ ಮಾರ್ಗವನ್ನು ಸ್ಥಳಾಂತರಿಸಿಲ್ಲ. ಈಗಾಗಲೇ ಪಟ್ಟಣ ವ್ಯಾಪ್ತಿಯ ಹೊನ್ಮಾಂವ್ನಿಂದ ಮಣಕಿವರೆಗೂ ಅಲ್ಲಲ್ಲಿ ಚತುಷ್ಪಥ ಕಾಮಗಾರಿ ನಡೆದಿದ್ದು, ಕೆಲವೆಡೆ ಡಾಂಬರು ಕೂಡ ಹಾಕಲಾಗಿದೆ. ಒಮ್ಮೆ ಇಲ್ಲಿ ಚತುಷ್ಪಥ ಕಾಮಗಾರಿ ಮುಗಿಯಿತೆಂದರೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬಹುದಾದರೂ, ನೆಲದೊಳಗಿನ ನೀರು ಹಾಗೂ ಒಳಚರಂಡಿ ಮಾರ್ಗವನ್ನು ಬದಲಿಸುವುದು ಕಷ್ಟಸಾಧ್ಯ. ಏಕೆಂದರೆ ಹೊಸದಾಗಿ ಮಾಡಿದ ರಸ್ತೆಯನ್ನು ನಟ್ಟ ನಡುವೆ ಅಗೆದು ಹಾಕಬೇಕಾಗುತ್ತದೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಶಾಸಕ ದಿನಕರ ಶೆಟ್ಟಿ, ಜಿಲ್ಲೆಯಲ್ಲಿ ನಡೆದ ಚತುಷ್ಪಥ ಕಾಮಗಾರಿ ಅವೈಜ್ಞಾನಿಕ, ಅಸಮರ್ಪಕ ಮತ್ತು ಸಂಪೂರ್ಣ ವಿಫಲ ಕಾಮಗಾರಿ ಯಾಗಿದೆ. ಕಾಮಗಾರಿಯಲ್ಲಿ ಗೊಂದಲ, ವಿವಾದಗಳು ಮುಗಿಯದ ಕಥೆಯಾಗಿದೆ ಎಂದಿದ್ದಾರೆ.
ಚತುಷ್ಪಥ ಕಾಮಗಾರಿ ಆರಂಭವಾದ ಹಲವು ವರ್ಷಗಳ ಬಳಿಕ 2018ರಲ್ಲಿ ಮಾಡಿದ ಹೆದ್ದಾರಿ ಅಂಚಿಗೆ ಒಳಚರಂಡಿ ವ್ಯವಸ್ಥೆ ಅಳವಡಿಸಲಾಗಿದೆ. ಹೀಗಾಗಿ ಇದರ ಸ್ಥಳಾಂತರದ ಜವಾಬ್ದಾರಿ ನಮ್ಮದಲ್ಲ. ಸ್ಥಳಾಂತರಕ್ಕೆ ಇನ್ನೂ ಕಾಯಲು ಸಾಧ್ಯವಿಲ್ಲ. ಚತುಷ್ಪಥ ಕಾಮಗಾರಿ ವೇಗವಾಗಿ ಮುಗಿಸಬೇಕಾಗಿದೆ.
| ಶಿಶುಮೋಹನ ರಾ.ಹೆ. ಯೋಜನಾ ನಿರ್ದೇಶಕ, ಮಂಗಳೂರು