ಸಚಿನ ಅವಟಿ 
ಜಿಲ್ಲೆ

ಚಡಚಣಕ್ಕೆ ಗ್ರಂಥಾಲಯ ಮಂಜೂರಾತಿಗೆ ಆಗ್ರಹ

ಚಡಚಣ: ತಾಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಗ್ರಂಥಾಲಯ ಮುಚ್ಚಿ ಹಲವು ವರ್ಷಗಳೇ ಕಳೆದಿದ್ದು, ಈ ಕೂಡಲೇ ಪಟ್ಟಣಕ್ಕೆ ಗ್ರಂಥಾಲಯ ಮಂಜೂರು ಮಾಡಬೇಕು ಎಂದು ಚಡಚಣ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಚಿನ ಅವಟಿ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕೇಂದ್ರವಾಗಿರುವ ಚಡಚಣ ಪಟ್ಟಣವು ಜನಪದ ಸಾಹಿತ್ಯ ಪಿತಾಮಹ ಎಂದು ಗುರುತಿಸಿಕೊಂಡಿರುವ ದಿ. ಸಿಂಪಿ ಲಿಂಗಣ್ಣನವರ ತವರೂರಾಗಿದ್ದು, ಪಟ್ಟಣದಲ್ಲಿ ನರ್ಸರಿಯಿಂದ ಪಿಜಿ ಕೋರ್ಸ್‌ವರೆಗೆ ಕಲಿಯಲು ಸಾಕಷ್ಟು ವಿದ್ಯಾ ಸಂಸ್ಥೆಗಳಿವೆ. ಈಗಾಗಲೇ ಪದವಿ ಪೂರೈಸಿ ಉದ್ಯೋಗಕ್ಕಾಗಿ ಅಲೆಯುತ್ತಿರುವ ಸಾಕಷ್ಟು ನಿರುದ್ಯೋಗಿಗಳಿದ್ದು, ಗ್ರಂಥಾಲಯ ಮಂಜೂರು ಮಾಡಿದಲ್ಲಿ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗಲಿದೆ ಎಂದರು.

ಪಟ್ಟಣ ತಾಲೂಕು ಕೇಂದ್ರವಾಗಿ ಹಲವು ವರ್ಷಗಳು ಕಳೆದರೂ ಕೂಡ ಸಬ್‌ರಜಿಸ್ಟರ್, ನ್ಯಾಯಾಲಯ, ಬಸ್ ಡಿಪೋ, ಅಗ್ನಿಶಾಮಕ ದಳ ಸೇರಿ ಹಲವು ಕಚೇರಿಗಳು ಈವರೆಗೂ ಆರಂಭವಾಗಿಲ್ಲ. ಈ ಕೂಡಲೇ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲೂಕು ಮಟ್ಟದ ಕಚೇರಿಗಳನ್ನು ಆರಂಭಿಸಲು ಸರ್ಕಾರ ಕ್ರಮ ವಹಿಸಬೇಕು. ವಿಳಂಬವಾದರೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು.